ಮಂಗಳೂರು, ಎ.6: ಇತ್ತೀಚೆಗೆ ಉಳ್ಳಾಲದ ಮೀನಿನ ವ್ಯಾಪಾರಿಯನ್ನು ಅಡ್ಡಗಟ್ಟಿ ತಲವಾರಿನಲ್ಲಿ ಹಲ್ಲೆಗೈದು ಹಣ ದರೋಡೆಗೈದ ಪ್ರಕರಣದ ಆರೋಪಿಗಳೇ ಬೆಂಗಳೂರಿನಲ್ಲಿ ಪೊಲೀಸರು ಗುಂಡಿಕ್ಕಿ ಬಂಧಿಸಲ್ಪಟ್ಟವರು ಅನ್ನೋದು ತಿಳಿದುಬಂದಿದೆ. ಬೆಂಗಳೂರಿನ ಕೊತ್ತನೂರು ಠಾಣೆಯ ಪೊಲೀಸರು ಉಡುಪಿ ಮೂಲದ ಇಬ್ಬರು ದರೋಡೆಕೋರರನ್ನು ಸೋಮವಾರ ಬಂಧಿಸಿದ್ದರು. ಇದೀಗ ತಿಂಗಳ ಹಿಂದೆ ಉಳ್ಳಾಲದಲ್ಲಿ ದರೋಡೆ ನಡೆಸಿದವರೂ ಅವರೇ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.
ಉಡುಪಿ ಮೂಲದ ಮಹಮ್ಮದ್ ಆಶಿಕ್ (22) ಮತ್ತು ಕುಂದಾಪುರ ಮೂಲದ ಇಸಾಕ್ (21) ಎಂಬ ಇಬ್ಬರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸೋಮವಾರ ಸಂಜೆ ಕಾರಿನಲ್ಲಿ ಸಾಗುತ್ತಿದ್ದಾಗ ಕೊತ್ತನೂರು ಠಾಣೆ ಇನ್ಸ್ ಪೆಕ್ಟರ್ ಚೆನ್ನೇಶ್ ಮತ್ತು ಪಿಎಸ್ಐ ಉಮೇಶ್ ಸೆರೆಹಿಡಿಯಲು ಯತ್ನಿಸಿದಾಗ, ಆರೋಪಿಗಳು ತಲವಾರಿನಲ್ಲಿ ಉಮೇಶ್ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ, ಚೆನ್ನೇಶ್ ತನ್ನಲ್ಲಿದ್ದ ರಿವಾಲ್ವರ್ ನಲ್ಲಿ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸಿದ್ದು, ಬಳಿಕ ಬಂಧಿಸಿದ್ದಾರೆ. ಸದ್ಯಕ್ಕೆ ಇಬ್ಬರನ್ನೂ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡಗಟ್ಟಿ ಆಕೆಯ ಬಳಿಯಿಂದ ಎಟಿಎಂ ಕಾರ್ಡ್ ಪಡೆದು ಹಣ ಎಗರಿಸಿದ್ದಲ್ಲದೆ, ಆಕೆಯ ಸರವನ್ನೂ ಕಿತ್ತುಕೊಂಡಿದ್ದರು. ಬಳಿಕ ಲೈಂಗಿಕ ಕಿರುಕುಳ ನೀಡಿ, ಬೆಳಂದೂರಿನ ವೈಟ್ ಫೀಲ್ಡ್ ಬಳಿ ಯುವತಿಯನ್ನು ಬಿಟ್ಟಿದ್ದರು. ಯುವತಿ ಮರುದಿನ ಕೊತ್ತನೂರು ಠಾಣೆಯಲ್ಲಿ ದೂರು ನೀಡಿದ್ದರು. ಡಕಾಯಿತಿ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಜಾಲ ಬೀಸಿದ್ದರು. ಸೋಮವಾರ ಸಂಜೆ ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿಯೇ ಕಾರಿನಲ್ಲಿ ಸಾಗುತ್ತಿದ್ದಾಗಲೇ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಮಂಗಳೂರು ಎಸಿಪಿ ದಿನಕರ ಶೆಟ್ಟಿ ಬಳಿ ಮಾಹಿತಿ ಕೇಳಿದಾಗ, ತಿಂಗಳ ಹಿಂದೆ ಮೀನಿನ ವ್ಯಾಪಾರಿ ದರೋಡೆ ಪ್ರಕರಣದಲ್ಲಿ ಶಾಮೀಲಾದವರೇ ಬೆಂಗಳೂರಿನಲ್ಲಿ ಪೊಲೀಸರು ಸೆರೆಹಿಡಿದ ಆರೋಪಿಗಳು ಅನ್ನೋದನ್ನು ತಿಳಿಸಿದ್ದಾರೆ. ಅಲ್ಲದೆ, ಅಲ್ಲಿಂದ ಬಾಡಿ ವಾರೆಂಟ್ ಪಡೆದು ಸದ್ಯದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಕಳೆದ ಮಾರ್ಚ್ 5ರಂದು ಬೆಳಗ್ಗೆ ಉಳ್ಳಾಲದ ಮೀನಿನ ವ್ಯಾಪಾರಿ ತನ್ನ ಟೆಂಪೋದಲ್ಲಿ ಮಂಗಳೂರಿನ ದಕ್ಕೆಗೆ ಬರುತ್ತಿದ್ದಾಗ, ಆಡುಂಕುದ್ರು ಹೆದ್ದಾರಿಯಲ್ಲಿ ಟೆಂಪೋ ಅಡ್ಡಗಟ್ಟಲಾಗಿತ್ತು. ಆಬಳಿಕ ತಲವಾರು ತೋರಿಸಿ, ವ್ಯಾಪಾರಿ ಬಳಿಯಿದ್ದ ಎರಡು ಲಕ್ಷ ರೂಪಾಯಿ ಹಣದ ಕಂತೆಯನ್ನು ಬಲವಂತದಿಂದ ಕಿತ್ತುಕೊಂಡಿದ್ದರು. ಈ ವೇಳೆ, ತಲವಾರನ್ನು ಕೈಯಿಂದ ಹಿಡಿದಿದ್ದರಿಂದ ವ್ಯಾಪಾರಿಯ ಕೈ ಅಂಗೈಗೆ ಗಾಯವಾಗಿ ರಕ್ತ ಹರಿದಿತ್ತು.
ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರ ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿತ್ತು. ಈಗ ಬಂಧಿಸಲ್ಪಟ್ಟವರು ಮೂಲತಃ ಉಡುಪಿಯವರಾಗಿದ್ದರೂ, ಉಪ್ಪಿನಂಗಡಿಯ ತಮ್ಮ ಸಂಬಂಧಿಕರ ಮನೆಯಲ್ಲೇ ಹೆಚ್ಚು ಇರುತ್ತಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post