ಮಂಗಳೂರು, ಮೇ.6: ಮಾನಸಿಕ ಖಿನ್ನತೆಯಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯಾಗಿದ್ದ ಯುವಕನೊಬ್ಬ ಆಸ್ಪತ್ರೆ ಕೊಠಡಿಯಲ್ಲಿ ನೇಣು ಹಾಕ್ಕೊಂಡು ಸಾವಿಗೆ ಶರಣಾಗಿದ್ದಾನೆ. ಮಂಜೇಶ್ವರ ಬಳಿಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮೃತ ಕೈದಿ. 2022ರ ಡಿಸೆಂಬರ್ ನಲ್ಲಿ ನೌಫಾಲ್ ಎನ್ ಡಿಪಿಎಸ್ ಕಾಯ್ದೆಯಡಿ ಕೋಣಾಜೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ. ಆನಂತರ ಮಂಗಳೂರು ಜೈಲಿನಲ್ಲೇ ಇದ್ದು ಯುವಕನ ಪರವಾಗಿ ಜಾಮೀನು ಕೊಡಿಸುವುದಕ್ಕೂ ಯಾರೂ ಬಂದಿರಲಿಲ್ಲ.
ಅತಿಯಾದ ಡ್ರಗ್ಸ್ ಸೇವನೆಯ ಚಟಕ್ಕೆ ಬಿದ್ದವರು ಅದು ಸಿಗದೇ ಇದ್ದಾಗ ಮಾನಸಿಕವಾಗಿ ತೊಂದರೆಗೀಡಾಗುತ್ತಾರೆ. ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಕಾರಣಕ್ಕೆ ನೌಫಾಲ್ ನನ್ನು ಚಿಕಿತ್ಸೆಗೆಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಎಪ್ರಿಲ್ 25ರಂದು ಚಿಕಿತ್ಸೆಗೆ ದಾಖಲಾಗಿದ್ದ ನೌಫಾಲ್, ಮೇ 6ರ ಸೋಮವಾರ ನಸುಕಿನ ವೇಳೆ ನಾಲ್ಕು ಗಂಟೆಗೆ ಬೆಡ್ ಶೀಟನ್ನೇ ಕಿಟಕಿಗೆ ಕಟ್ಟಿ ಅದನ್ನು ಕುಣಿಕೆಯಾಗಿಸಿ ಕೊರಳೊಡ್ಡಿದ್ದಾನೆ.
ಅದೇ ಕೊಠಡಿಯಲ್ಲಿ ಇತರ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಹೊರಗಡೆ ಕಾವಲಿಗೆ ಪೊಲೀಸರಿದ್ದರು. ಅದರ ನಡುವೆಯೂ ಯುವಕ ಸಾವಿಗೆ ಶರಣಾಗಿದ್ದಾನೆ. ಮನೆಯವರನ್ನು ಬಿಟ್ಟು ಗಾಂಜಾ ವ್ಯಸನ ಮತ್ತು ಅದರ ವಹಿವಾಟಿನಲ್ಲಿ ನಿರತನಾಗಿದ್ದ ಯುವಕ ನೌಫಾಲ್ ಆಚಾನಕ್ಕಾಗಿ ಜೈಲು ಸೇರಿದ್ದಲ್ಲದೆ, ಆಸ್ಪತ್ರೆಯಲ್ಲೀಗ ಅನಾಥ ಶವ ಆಗುವಂತಾಗಿದೆ. 2022 ರ ಡಿಸೆಂಬರಲ್ಲಿ ಕೊಣಾಜೆ ಪೊಲೀಸರು ಬೋಳಿಯಾರ್ ಎಂಬಲ್ಲಿ ಮಹಮ್ಮದ್ ನೌಫಾಲ್, ಬಾತಿಷ್, ಮಹಮ್ಮದ್ ಅಶ್ರಫ್ ಎಂಬವರನ್ನ ಬಂಧಿಸಿ ಕೆಜಿ ಗಟ್ಟಲೆ ಗಾಂಜಾ ವಶಪಡಿಸಿದ್ದರು. ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದ್ದರಿಂದ ಜಾಮೀನು ಆಗಿರಲಿಲ್ಲ ಎನ್ನುವ ಮಾಹಿತಿ ಪೊಲೀಸರಿಂದ ಲಭಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post