ಮಂಗಳೂರು: ಮೇ 10ರಂದು ನಡೆಯಲಿರುವ ನವೋದಯ ಸ್ವಸಹಾಯ ಗುಂಪುಗಳ ಸಮಾವೇಶ “ರಜತ ಸಂಭ್ರಮ” ನೆನಪಿಗಾಗಿ ವಿಶಿಷ್ಟ ರೀತಿಯ ಲಾಂಛನವನ್ನು ಕರ್ನಾಟಕದ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಿಡುಗಡೆ ಗೊಳಿಸಲಿರುವರು ಎಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನವೋದಯ ಗ್ರಾಮ ವಿಕಾಸ ಟ್ರಸ್ಟ್ ಪ್ರವರ್ತಿತ ನವೋದಯ ಸ್ವಸಹಾಯ ಗುಂಪುಗಳ ಸ್ಥಾಪನೆಯ “ನವೋ ದಯ ರಜತ ಸಂಭ್ರಮ’ ಸಮಾವೇಶ ಮೇ 10ರ ಬೆಳಗ್ಗೆ 10ಕ್ಕೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ. 1.5 ಲಕ್ಷ ಮಂದಿ ನೀಲಿ ಸಮವಸ್ತ್ರ ಧರಿಸಿ ಪಾಲ್ಗೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ನವೋದಯ ಗ್ರಾಮ ವಿಕಾಸ ಟ್ರಸ್ಟ್ ಸಂಸ್ಥಾಪಕ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಬ್ಯಾಂಕ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನವೋದಯ ಸ್ವಸಹಾಯ ಗುಂಪುಗಳು ಗ್ರಾಮೀಣರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆ ಮೂಡಿಸಿ ಸಂಘಟನೆ ಹಾಗೂ ಜನಜಾಗೃತಿ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿವೆ. ನಮ್ಮಿಂದ ನಮಗಾಗಿ, ನಮಗೋಸ್ಕರ ಸ್ವಸಹಾಯ ಸಂಘಗಳು ಎಂಬ ಧೋರಣೆ ಹೊಂದಿರುವ ಈ ಗುಂಪುಗಳು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯೊಂದಿಗೆ ಸಬಲೀಕರಣದ ಹಾದಿಯಲ್ಲಿ ದಾಪುಗಾಲು ಹಾಕುತ್ತಿವೆ. ಎಲ್ಲರೂ ಒಂದೇ ಎಂಬ ಸಮಾನತೆಯ ಮನೋಭಾವದೊಂದಿಗೆ ಸ್ವಸಹಾಯ ಗುಂಪಿನ 1.5 ಲಕ್ಷ ಸದಸ್ಯೆಯರು ಸಮವಸ್ತ್ರ ಧರಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸಮಾವೇಶದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನವೋದಯ ರಜತ ಸಂಭ್ರಮದ ನೆನಪಿಗಾಗಿ ವಿಶಿಷ್ಟ ಲಾಂಛನವನ್ನು ಬಿಡುಗಡೆಗೊಳಿಸುವರು. ನವೋದಯ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸವಲತ್ತು ವಿತರಣೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೆರವೇರಿಸಲಿದ್ದು, ರಜತ ಸಂಭ್ರಮದ “ಸಂತೃಪ್ತಿ’ ಸ್ಮರಣ ಸಂಚಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆಗೊಳಿಸುವರು.
ರಜತ ಸಂಭ್ರಮ ಆಚರಣೆಯ ಸಂದರ್ಭ ಸಹಕಾರಿ ಧ್ವಜಾರೋಹಣವನ್ನು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೆರವೇರಿಸಲಿದ್ದು, ಅತ್ಯುತ್ತಮ ನವೋದಯ ಗುಂಪುಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ವಿ. ಜೋಶಿ ಪ್ರಶಸ್ತಿ ಪ್ರದಾನಿಸುವರು. ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ|ಡಿ.ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವರಾದ ಕೆ. ಎನ್. ರಾಜಣ್ಣ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶ ನಾಲಯ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹಾಗೂ ಅಬಕಾರಿ ಸಚಿವರಾದ ಆರ್.ಬಿ. ತಿಮ್ಮಾಪುರ ಅವರು ಭಾಗವಹಿಸಲಿದ್ದಾರೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್.ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ., ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎಂ.ವಾದಿರಾಜ ಶೆಟ್ಟಿ,ಎಸ್.ಬಿ. ಜಯರಾಮ್ ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಕುಶಾಲಪ್ಪ ಗೌಡ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್.ಜೈನ್, ಸುನಿಲ್ ಕುಮಾರ್ ಬಜಗೋಳಿ, ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಟ್ರಸ್ಟ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post