ಮಂಗಳೂರು, ಜೂ.5: ನಗರದ ಮಾರ್ಕೆಟ್ ರಸ್ತೆಯ ನಿರ್ಮಾಣ ಹಂತದಲ್ಲಿರುವ ಸ್ಮಾರ್ಟ್ ಸಿಟಿ ಮಾರ್ಕೆಟ್ ಕಟ್ಟಡದಲ್ಲಿ ಸುಮಾರು 35ರಿಂದ 40 ವರ್ಷ ಪ್ರಾಯದೊಳಗಿನ ಅಪರಿಚಿತ ಯುವಕನ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಯುವಕನ ಎಡಕಾಲಿನ ಗಂಟಿನ ಕೆಳ ಭಾಗದಲ್ಲಿ ಚರ್ಮ ಹೋದ ಸಣ್ಣ ರಕ್ತಗಾಯವಾಗಿದೆ. ಅಲ್ಲದೆ ಕಾಲಿನ ಗಂಟಿನ ಮೇಲ್ಭಾಗದಲ್ಲಿ ದಪ್ಪವಾಗಿರುವುದು ಕಂಡುಬಂದಿದೆ.
ಮೃತದೇಹದ ಪಕ್ಕದಲ್ಲಿ ಸುಮಾರು 20 ಅಡಿ ಉದ್ದದ ಕಬ್ಬಿಣದ 4 ರಾಡ್‌ಗಳು, ರಕ್ತದ ಕಲೆಗಳು ಕಂಡುಬಂದಿದೆ. ಮೃತದೇಹದ ಪಕ್ಕದಲ್ಲಿ ಗಾಯವಾದ ಸ್ಥಳಕ್ಕೆ ಕಟ್ಟಲು ಉಪಯೋಗಿಸಿದಂತೆ ಕಂಡುಬರುವಂತಹ ರಕ್ತದ ಕಲೆಯಿರುವ ಬೆಡ್‌ಶೀಟ್‌ನ ಒಂದು ಸಣ್ಣ ತುಂಡು ಕೂಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಕದ ಸಣ್ಣ ಕೋಣೆಯಲ್ಲಿ ಮಲಗಲು ಬೆಡ್‌ಶೀಟ್ ಹಾಸಿರುವುದು ಕಂಡುಬಂದಿದೆ. ಬುಧವಾರ ರಾತ್ರಿ ವೇಳೆ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬಂದ ವೇಳೆ ಯಾರೋ ಆತನನ್ನು ಕೊಲೆ ಮಾಡಿ ಹೋಗಿರಬಹುದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಮಂಗಳೂರು ಡೆವೆಲಪ್ಪರ್ಸ್ ಪ್ರೈ.ಲಿ. ಕಂಪೆನಿಯ ಹೌಸ್‌ಕೀಪಿಂಗ್ ಸೂಪರ್‌ವೈಸರ್ ಫಕೀರೇಶ್ ಇ.ಟಿ. ನೀಡಿದ ದೂರಿನಂತೆ ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5.9 ಅಡಿ ಎತ್ತರದ, ಎಣ್ಣೆ ಕಪ್ಪು ಮೈಬಣ್ಣದ, ಸಾಧಾರಣ ಶರೀರದ ಈ ವ್ಯಕ್ತಿಯ ಎಡಕಣ್ಣಿನ ಕೆಳಭಾಗದಲ್ಲಿ ಕಪ್ಪುಬಣ್ಣದ ಮಚ್ಚೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post