ಮಂಗಳೂರು, ಡಿ 05: ಸಪ್ತಪದಿ ಇದು ಸಪ್ತಪದಿ. ಇದು ಏಳು ಜನುಮಗಳ ಅನುಬಂಧ ಎಂಬಂತೆ ಮಂಗಳೂರಿನಲ್ಲೊಂದು ವಿಶೇಷ ವಿವಾಹ ನಡೆದಿದೆ. ದೂರದ ಥೈಲ್ಯಾಂಡ್ ದೇಶಕ್ಕೂ ಭಾರತಕ್ಕೂ ಸಂಬಂಧ ಕೂಡಿ ಬಂದಿದೆ. ಇಲ್ಲಿ ಥೈಲ್ಯಾಂಡ್ ಸುಂದರಿ ಅಪ್ಪಟ ಕನ್ನಡಿಗನಿಗೆ ಜೋಡಿಯಾಗಿದ್ದಾಳೆ. ಕಡಲ ನಗರಿ ಮಂಗಳೂರು ಈ ವಿಶೇಷ ಜೋಡಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಕಾಲಲ್ಲಿ ಕಾಲುಂಗುರ, ಮೈ ಮೇಲೆ ಧಾರೆ ಸೀರೆ, ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ. ನೋಡುವುದಕ್ಕೆ ಥೇಟ್ ಭಾರತೀಯ ನಾರಿಯಂತೆ ಕಾಣಿಸಿದ ಥೈಲ್ಯಾಂಡ್ ದೇಶದ ಯುವತಿ ಮೊಂತಕಾನ್ ಸಸೂಕ್. ಆದರೆ ಈಗ ಈಕೆ ಮಂಗಳೂರಿನ ಸೊಸೆ.
ಮಂಗಳೂರಿನ ಗೋರಿಗುಡ್ಡೆ ನಿವಾಸಿ ಪೃಥ್ವಿರಾಜ್ ಜೊತೆ ಈಕೆಯ ವಿವಾಹವಾಗಿದೆ. ಅದೂ ಅಪ್ಪಟ ಭಾರತೀಯ ಹಿಂದೂ ಸಂಪ್ರದಾಯದಂತೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಈ ವಿವಾಹ ಕಾರ್ಯಕ್ರಮ ಜರುಗಿದ್ದು, ಮಂಗಳಾದೇವಿಯ ಆಶೀರ್ವಾದ ಪಡೆದು ನವ ವಧು ವರರು ಹೊಸ ಬಾಳ ಪಯಣವನ್ನ ಆರಂಭಿಸಿದ್ದಾರೆ.
ಮಂಗಳೂರಿನ ಯುವಕ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್ ಯುವತಿ ಮೊಂತಕಾನ್ ಸಸೂಕ್ ಮಂಗಳೂರಿನ ಮಂಗಳಾದೇವಿ ಸನ್ನಿಧಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆಯೇ ಥೈಲ್ಯಾಂಡ್ ಸಂಪ್ರದಾಯ ಪ್ರಕಾರ ಇವರು ಜುಲೈನಲ್ಲಿ ವಿವಾಹವಾಗಿದ್ದರು. ಮಂಗಳೂರಿನ ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪೆನಿ ಮುನ್ನಡೆಸುತ್ತಿದ್ದಾರೆ. ಟಾಟಾ, ಪೋರ್ಸ್ ಮುಂತಾದ ಕಂಪೆನಿಗಳಿಗೆ ಸಾಫ್ಟ್‌ವೇರ್ ಸರ್ವೀಸ್ ಸೇವೆ ಒದಗಿಸುತ್ತಿದ್ದಾರೆ.
ಹಿಂದೂ ಸಂಪ್ರದಾಯದಂತೆ ಮದ್ವೆ : ಅಪ್ಪಟ ಹಿಂದೂ ಸಂಪ್ರದಾಯದಂತೆ ಇಂದು ಮಂಗಳಾದೇವಿಯ ಸಮ್ಮುಖದಲ್ಲಿ ವಿವಾಹ ಮಹೋತ್ಸವ ಸಂಪನ್ನವಾಗಿದೆ. ವಧು ಮೊಂತಕಾನ್ ಸಸೂಕ್ ಬೌದ್ಧ ಧರ್ಮಕ್ಕೆ ಸೇರಿದ್ದು ಕಳೆದ ಜುಲೈ ತಿಂಗಳಲ್ಲೇ ಬೌದ್ಧ ಸಂಪ್ರದಾಯದಂತೆ ಥೈಲ್ಯಾಂಡ್‌ನಲ್ಲಿ ವಿವಾಹ ನಡೆದಿದೆ. ಇನ್ನು ಮುಂದೆ ಥೈಲ್ಯಾಂಡ್ ತ್ಯಜಿಸಿ ತನ್ನ ಪತಿಯೊಂದಿಗೆ ಭಾರತದಲ್ಲೇ ಮೊಂತಕಾನ್ ಸಸೂಕ್ ಸಂಸಾರ ನಡೆಸಲಿದ್ದಾರೆ. ಅರ್ಥಾತ್ ಭಾರತದ ಸೊಸೆಯಾಗಿದ್ದಾಳೆ .
ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮ ಕಥೆ ಭಾರತದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡುವ ಮೂಲಕ ಸುಂದರ ತಿರುವು ಪಡೆದಿದೆ. ಈ ಮುದ್ದಾದ ಜೋಡಿಗೆ ಯಾರ ದೃಷ್ಟಿಯೂ ಬೀಳದೆ ನೂರು ಕಾಲ ಇವರು ಚೆನ್ನಾಗಿ ಬಾಳಲಿ ಎನ್ನುವುದೇ ನಮ್ಮ ಆಶಯ. ಹಾಗೇ ನಿಮ್ಮ ಆಶೀರ್ವಾದ ಈ ನವ ಜೋಡಿಗೆ ಇರಲಿ.
Discover more from Coastal Times Kannada
Subscribe to get the latest posts sent to your email.
Discussion about this post