ಮಂಗಳೂರು: ವ್ಯಕ್ತಿಯೊಬ್ಬರು ಫೇಸ್ ಬುಕ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ, ಆ ಮೂಲಕ ಹಣ ಹೂಡಿಕೆ ಮಾಡಿ 33,11,000 ರೂ. ಕಳೆದುಕೊಂಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಸುಮಾರು 10 ವರ್ಷಗಳಿಂದ ತರಕಾರಿ- ಹಣ್ಣು ವ್ಯಾಪಾರ ಮಾಡಿಕೊಂಡಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅವರಿಗೆ ಫೇಸ್ ಬುಕ್ ಮೂಲಕ ಒಂದು ಲಿಂಕ್ ಕಳುಹಿಸಿದ್ದ. ಆ ಲಿಂಕ್ ಕ್ಲಿಕ್ ಮಾಡಿದಾಗ ಅದು ವಾಟ್ಸ್ ಆ್ಯಪ್ ಗೆ ಸಂಪರ್ಕವಾಗಿದೆ. ಅದರಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ZARABET ಎಂಬ ಹೂಡಿಕೆ ಆ್ಯಪ್ ಡೌನ್ ಲೋಡ್ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ದೂರುದಾರರು ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ.
ಅಪರಿಚಿತ ವ್ಯಕ್ತಿ ಮೊದಲಿಗೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು ಸೆ.24ರಂದು 30,000 ರೂ. ಹಣ ವರ್ಗಾಯಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರ ಖಾತೆಗೆ 34,000 ರೂ. ಜಮೆಯಾಗಿದೆ. ಆದರೆ ಇದನ್ನು ಸತ್ಯವೆಂದು ಭಾವಿಸಿದ ಅವರು, ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಸ್ಕ್ಯಾನರ್ ಗಳಿಗೆ ಮತ್ತು ಖಾತೆಗಳಿಗೆ ಸೆ.24 ರಿಂದ ಡಿ.3ರ ವರೆಗೆ ಹಂತ ಹಂತವಾಗಿ ಒಟ್ಟು 33,11,000 ರೂ. ವರ್ಗಾಯಿಸಿದ್ದಾರೆ. ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಸು ನೀಡುವಂತೆ ಕೇಳಿದಾಗ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಹಾಗೂ ಸರ್ವೀಸ್ ಟ್ಯಾಕ್ಸ್ ಪಾವತಿ ಮಾಡುವಂತೆ ತಿಳಿಸಿದ್ದಾನೆ.
ಇದರಿಂದ ಅನುಮಾನ ಬಂದು ತಮ್ಮ ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಖಚಿತವಾಗಿದೆ. ಹೂಡಿಕೆ ನೆಪದಲ್ಲಿ ಆನ್ ಲೈನ್ ನಲ್ಲಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post