ಕಿನ್ನಿಗೋಳಿ : ಕೈ ಮಗ್ಗ ನೇಕಾರರಿಗೆ ಇರುವ ವಿವಿಧ ಸರಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವೊಂದು ದ.ಕ. ಮತ್ತು ಉಡುಪಿ ಜಿಲ್ಲೆಗಳ ನೇಕಾರರಿಗೆ 05/01/2023 ರಂದು ತಾಳಿಪಾಡಿ ನೇಕಾರರ ಸಹಕಾರಿ ಸಂಘ, ಕಿನ್ನಿಗೋಳಿಯಲ್ಲಿ ನಡೆಯಿತು. ಉಡುಪಿ ಸೀರೆ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ವೀವರ್ಸ್ ಸರ್ವಿಸ್ ಸೆಂಟರ್ ನ ಉಪ ನಿರ್ದೇಶಕರಾದ ಶ್ರೀ ಮಾರಿಮುತ್ತು ಮತ್ತು ತಾಂತ್ರಿಕ ವಿಭಾಗದ ಅಧಿಕಾರಿ ಶ್ರೀ ಮೋಹನ್ ಕುಮಾರ್ , ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಭಯ ಜಿಲ್ಲೆಗಳ ಉಪ ನಿರ್ದೇಶಕರಾದ ಶ್ರೀ ಶಿವ ಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಉಡುಪಿ ಮತ್ತು ದ. ಕ. ಜಿಲ್ಲೆಗಳ ನೇಕಾರರ ಸಂಘದ ನೇಕಾರರು ಮತ್ತು ಆಡಳಿತಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.


ಕೇಂದ್ರ ಸರಕಾರದ ಯೋಜನೆಗಳಾದ ಸಮರ್ಥ್ ತರಬೇತಿ, ಪೆಹಚಾನ್ ಕಾರ್ಡ್ , ಮುದ್ರಾ ಸಾಲ ಸೌಲಭ್ಯ , ವಿದ್ಯಾರ್ಥಿ ವೇತನ, ವಿಮೆ, ಭವಿಷ್ಯ ನಿಧಿ ಬಗ್ಗೆ ವೀವರ್ ಸರ್ವಿಸ್ ಸೆಂಟರ್ ನ ಅಧಿಕಾರಿಗಳು ಮಾಹಿತಿ ನೀಡಿದರು.


ರಾಜ್ಯ ಕೈ ಮಗ್ಗ ಇಲಾಖೆಯ ಯೋಜನೆಗಳಾದ ನೇಕಾರ ಸಮ್ಮಾನ , ಅರೋಗ್ಯ ವಿಮೆ, ರಿಬೇಟ್ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಕಾರರ ಉಳಿತಾಯ ಹಣ, ಥ್ರಿಫ್ಟ್ ಫಂಡ್ ನ ಹೆಚ್ಚಿನ ಅಂಶ ಬಿಡುಗಡೆ ಆಗಿರುವ ಬಗ್ಗೆ ಕೈ ಮಗ್ಗ ಇಲಾಖೆ ಅಧಿಕಾರಿ ವಿವರಿಸಿದರು.
ಉಭಯ ಜಿಲ್ಲೆಗಳ ಸಕ್ರಿಯ ನೇಕಾರರಲ್ಲಿ ಹೆಚ್ಚಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ನಂತರ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಕೆಲವೊಂದು ಸವಲತ್ತುಗಳು ಸಿಗದ ನೇಕಾರರು ಸಮಸ್ಯೆಯ ಬಗ್ಗೆ ಚರ್ಚಿಸಿ ಸರಿಪಡಿಸುವ ಬಗ್ಗೆ ತಿಳಿದುಕೊಂಡರು.


ಕದಿಕೆ ಟ್ರಸ್ಟ್ ನ ಶಿಫರಸ್ಸಿನ ಮೇರೆಗೆ,ದ. ಕ. ಮತ್ತು ಉಡುಪಿ ಜಿಲ್ಲೆಯ 57 ನೇಕಾರರಿಗೆ ಮಗ್ಗದ ಪರಿಕರಗಳು, 35 ನೇಕಾರರಿಗೆ ಸೌರ ಬೆಳಕಿನ ವ್ಯವಸ್ಥೆ ಮತ್ತು ಉಡುಪಿ ಜಿಲ್ಲೆಯ ಒಬ್ಬ ನೇಕಾರರಿಗೆ ಮಗ್ಗದ ಕೊಠಡಿಗಳನ್ನು ವೀವರ್ಸ್ ಸರ್ವಿಸ್ ಸೆಂಟರ್ ಈ ವರುಷ ನೀಡಿದೆ. ಮಗ್ಗದ ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಕದಿಕೆ ಟ್ರಸ್ಟ್ ನ ಮೂಲಕ ಪಡೆದ ಜಿ ಐ ಟ್ಯಾಗ್ ನ ಅಧಿಕೃತ ಬಳಕೆದಾರ ಮಾನ್ಯತೆಯ ಸರ್ಟಿಫಿಕೇಟ್ ಗಳನ್ನು ಪಡು ಪಣಂಬೂರು, ಉಡುಪಿ, ಶಿವಳ್ಳಿ ಮತ್ತು ಬ್ರಹ್ಮವಾರ ಸಂಘಗಳಿಗೆ ವಿತರಿಸಲಾಯಿತು. ಈ ಸರ್ಟಿಫಿಕೇಟ್ ಪಡೆಯುವಲ್ಲಿ ಸಹಕಾರ ನೀಡಿದ ಚೆನ್ನೈ ಯ ಜಿ ಐ ಕಚೇರಿ ಯ ಶ್ರೀ ಪ್ರಶಾಂತ್ ಕುಮಾರ್ ಮತ್ತು ವಿ ಟಿ ಪಿ ಸಿ , ಬೆಂಗಳೂರು ಕಚೇರಿಯ ಶ್ರೀಮತಿ ಪ್ರಭಾವತಿ ರಾವ್ ಅವರಿಗೆ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಧನ್ಯವಾದ ತಿಳಿಸಿದರು. ತಾಳಿಪಾಡಿ ನೇಕಾರರ ಸಂಘಕ್ಕೆ 2020 ರಲ್ಲಿ ಕದಿಕೆ ಟ್ರಸ್ಟ್ ಪ್ರಯತ್ನದ ನಂತರ ಉಡುಪಿ ಸೀರೆ ಜಿ ಐ ಯ ಅಧಿಕೃತ ಬಳಕೆದಾರ ಮಾನ್ಯತೆ ದೊರೆತಿದೆ.
Discover more from Coastal Times Kannada
Subscribe to get the latest posts sent to your email.








Discussion about this post