ಮಂಗಳೂರು : ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದವರು. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನ್ಮ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ ಈಗ ಆರೋಗ್ಯವಾಗಿದ್ದಾರೆ. ಈ ಮಕ್ಕಳು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿವೆ. ಆದರೆ ಇದು 30 ವಾರಗಳ ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಮಕ್ಕಳಿಗೆ ಎನ್ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತೆಲಂಗಾಣ ಮೂಲದ ದಂಪತಿಗಳಾದ ತೇಜ ಹಾಗೂ ಬಾನೊತ್ ದುರ್ಗಾ ಈ ನಾಲ್ಕು ಮಕ್ಕಳನ್ನು ಪಡೆದ ಖುಷಿಯಲ್ಲಿದ್ದಾರೆ. ತೇಜ ಅವರು ಮಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.ದುರ್ಗಾ ಅವರು ಗರ್ಭಧರಿಸಿದ ಬಳಿಕ ಸ್ಕ್ಯಾನಿಂಗ್ ಗೆಂದು ಫಾ.ಮುಲ್ಲರ್ ಆಸ್ಪತ್ರೆಗೆ ಬಂದಾಗ ನಾಲ್ಕು ಶಿಶುಗಳಿರುವುದು ಗೊತ್ತಾಗಿದೆ. ಸಾಮಾನ್ಯವಾಗಿ ಐವಿಎಫ್ ಕೃತಕ ಗರ್ಭಧಾರಣೆಯಲ್ಲಿ ಈ ರೀತಿ ಒಂದಕ್ಕಿಂತ ಹೆಚ್ಚು ಮಕ್ಕಳ ಜನನವಾಗುವುದು ಹೆಚ್ಚು, ಆದರೆ ಈ ಪ್ರಕರಣ ಸಹಜ ಗರ್ಭಧಾರಣೆಯದ್ದಾಗಿದ್ದರಿಂದ ಇದು ವಿರಳ ಎನ್ನುತ್ತಾರೆ, ಈ ಹೆರಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೈನೆಕಾಲಜಿಸ್ಟ್ ಡಾ|ಜೋಯ್ಲಿನ್ ಅಲ್ಮೇಡ.
ತಮ್ಮ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾದಾಗ ದಂಪತಿ ಸಹಜವಾಗಿ ಖುಷಿಯಾದರು. ಆದರೆ ಈ ಗರ್ಭಧಾರಣೆ ಹಾಗೂ ಹೆರಿಗೆ ವೇಳೆಯ ಗಂಭೀರತೆ ಬಗ್ಗೆ ವಿವರಿಸಿದೆವು, ಅಗತ್ಯವಿದ್ದರೆ ಶಿಶುಗಳ ಸಂಖ್ಯೆಯನ್ನು ಇಳಿಸುವ(ಫೀಟಲ್ ರಿಡಕ್ಷನ್) ಆಯ್ಕೆ ಇದೆಯೆಂದೂ ತಿಳಿಸಿದೆವು, ಆದರೆ ದಂಪತಿಗಳು ನಾಲ್ಕೂ ಮಕ್ಕಳನ್ನೂ ಉಳಿಸಿಕೊಳ್ಳುವುದಕ್ಕೆ ಮುಂದಾದರು ಎನ್ನುತ್ತಾರೆ ಡಾ|ಅಲ್ಮೇಡ.
31 ವಾರಗಳ ಕಾಲ ದುರ್ಗಾ ಅವರನ್ನು ನಿರಂತರ ಪರಿಶೀಲನೆ ಮಾಡುತ್ತಿರಲಾಗಿದೆ. ಹಿಂದೆ ಆಕೆಗೆ ಒಮ್ಮೆ ಸೆಸೇರಿಯನ್ ಆಗಿದ್ದು, ಒಂದು ಮಗುವಿದೆ, ಹಾಗಾಗಿ ಗರ್ಭಕೋಶದಲ್ಲಿ ಅದರ ಹೊಲಿಗೆ ಇರುವುದರಿಂದ ಮತ್ತೆ ಸೆಸೇರಿಯನ್ ಮಾಡುವಾಗ ಹೆಚ್ಚಿನ ನಿಗಾ ಅಗತ್ಯವಿತ್ತು.
32ನೇ ವಾರದಲ್ಲಿ ನ.9ರಂದು ಹೆರಿಗೆ ಮಾಡಿಸಲಾಯಿತು. ನಾಲ್ಕು ಶಿಶುಗಳಿದ್ದುದರಿಂದ ಎಲ್ಲಾ ವೈದ್ಯರ ಟೀಂ ವರ್ಕ್ ಅಗತ್ಯವಿದ್ದು, ಈ ಇಡೀ ಪ್ರಕ್ರಿಯೆಯಲ್ಲಿ ರೇಡಿಯೇಶನ್ ವಿಭಾಗದ ಡಾ|ಮುರಳೀಧರ್, ಡಾ.ರಾಮ್ ಭಾಸ್ತಿ ಮತ್ತು ಡಾ|ಮಹೇಶ್, ಪ್ರಸೂತಿ ವಿಭಾಗದ ಡಾ|ವಿಸ್ಮಯ, ಡಾ|ಏಕ್ತ, ಡಾ|ದಿಯಾ, ಡಾ|ನಯನ, ಮಕ್ಕಳ ತಜ್ಞೆ ಡಾ.ಚಂದನಾ ಪೈ ಮತ್ತಿತರರು ನೆರವು ನೀಡಿದರು. ಶಸ್ತ್ರಕ್ರಿಯಾ ಕೊಠಡಿ ಸಿಬಂದಿಗಳೂ ಸೂಕ್ತ ಸಹಕಾರವಿತ್ತರು. ಹೆರಿಗೆ ಬಳಿಕ ಮಕ್ಕಳ ತೂಕ ಕಡಿಮೆ ಇದ್ದ ಕಾರಣ ಡಾ|ಪ್ರವೀಣ್ ಬಿ.ಕೆ ಅವರ ತಂಡ ಗರಿಷ್ಠ ಆರೈಕೆ ನೀಡಿತು. ಇದರಿಂದ ಶಿಶುಗಳು ಪ್ರತಿದಿನವೂ ಉತ್ತಮ ಆರೋಗ್ಯ ಪ್ರಗತಿ ದಾಖಲಿಸಿವೆ.
ನಾಲ್ಕು ಮಕ್ಕಳ ಜನನ ಬಹಳ ಅಪರೂಪವಾಗಿದ್ದು, ಇದು 7 ಲಕ್ಷ ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ. ಸ್ತ್ರೀರೋಗತಜ್ಞೆ, ಡಾ. ಜೋಯ್ಲೀನ್ ಡಿಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದರು. ಹೆರಿಗೆ ಸಂದರ್ಭ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ತಾಯಿ-ಮಕ್ಕಳಿಗೆ ಆರೈಕೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post