ಉಡುಪಿ, ಏಪ್ರಿಲ್ 06: ‘ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ’ ಎಂಬ ಗಾದೆ ಮಾತಿಗೆ ಜ್ವಲಂತ ಉದಾಹರಣೆ ಆಗಬಲ್ಲ ಅಪರೂಪದ ಘಟನೆ ಉಡುಪಿ ಜಿಲ್ಲೆಯ ಕೊಡವೂರಿನಲ್ಲಿ ನಡೆದಿದೆ. ಬಾವಿಗೆ ಬಿದ್ದು ಮೂರು ದಿನಗಳಿಂದ ನರಳಾಡುತ್ತಿದ್ದ ವೃದ್ಧನ ಜೀವವನ್ನು ಗ್ಯಾಸ್ ಸಿಲಿಂಡರ್ ಎತ್ತಿಕೊಂಡು ಬಂದಿದ್ದ ಸಿಬಂದಿ OTP ಕಾರಣಕ್ಕೆ ಹುಡುಕಾಡಿ ರಕ್ಷಿಸಿದ ಅಚ್ಚರಿಯ ಘಟನೆ ನಡೆದಿದೆ.
ಕೊಡವೂರು ಪ್ರದೇಶದ ಕಂಬ್ಲಕಟ್ಟದ ಮನೆಯೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದ ಶ್ರೀನಿವಾಸ್ ಆಚಾರ್ಯ (62) ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ಬಾವಿಗೆ ಬಿದ್ದಿದ್ದರು. ಬಾವಿಯಲ್ಲಿ ಅಳವಡಿಸಿದ್ದ ಪಂಪ್‌ನಲ್ಲಿ ಕಸ ತುಂಬಿದ್ದರಿಂದ ಅದನ್ನು ಸ್ವಚ್ಛಗೊಳಿಸಲು ತೆರಳಿದ್ದ ಅವರು, ಪೈಪ್ ಎಳೆಯುವ ವೇಳೆ ಹಗ್ಗ ತುಂಡಾಗಿ, ಸುಮಾರು 15–20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಒಂಟಿಯಾಗಿ ವಾಸಿಸುತ್ತಿದ್ದ ಕಾರಣ, ಅವರ ಕೂಗು ಯಾರಿಗೂ ಕೇಳಿಸದೇ ಹೋಗಿದ್ದು, ಅವರು ಬಾವಿಯೊಳಗೆ ಪೈಪ್ ಹಿಡಿದು ಮೂರು ದಿನಗಳ ಕಾಲ ಜೀವ ಉಳಿಸಿಕೊಂಡಿದ್ದರು.
ಜೀವ ಉಳಿಸಿದ್ದು ಗ್ಯಾಸ್ ಸಿಲಿಂಡರ್ ; ಶ್ರೀನಿವಾಸ್ ಆಚಾರ್ಯರ ಜೀವ ಉಳಿಸಿದ್ದು ಒಂದು ಗ್ಯಾಸ್ ಸಿಲಿಂಡರ್ ಎಂದರೆ ಅಚ್ಚರಿ ಆಗಬಹುದು. ಶ್ರೀನಿವಾಸ್ ಅವರು ಸಿಂಗಲ್ ಗ್ಯಾಸ್ ಸಿಲಿಂಡರ್ ಹೊಂದಿದ್ದು ತಿಂಗಳು ತುಂಬುತ್ತಲೇ ಹೊಸ ಸಿಲಿಂಡರ್‌ಗೆ ಬುಕ್ ಮಾಡಿ ಪರಿಚಯದ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದಿದ್ದರು. ಈ ನಡುವೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಿದ ಕಾರಣ OTP ಅಗತ್ಯವಿತ್ತು. ಗ್ಯಾಸ್ ಡೆಲಿವರಿ ವೇಳೆ ಸಿಬಂದಿ ಮನೆಯಲ್ಲಿ ಹುಡುಕಾಡಿದ್ದು ಯಾರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.
ಇದರಿಂದ ಅವರ ಪರಿಚಯದ ಗಣೇಶ್ ಹುಡುಕಾಟ ನಡೆಸಿದಾಗ, ತೋಟದ ಬಾವಿಯಲ್ಲಿ ಶ್ರೀನಿವಾಸ್ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ವೃದ್ಧರನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದೆ. ಬಾವಿಗೆ ಬಿದ್ದರೂ ಅದಕ್ಕೂ ಮೊದಲೇ ಗ್ಯಾಸ್ ಬುಕ್ಕಿಂಗ್ ಮಾಡಿದ್ದರಿಂದ ಸಿಬ್ಬಂದಿ ಬಂದು ಹುಡುಕಾಡಿದ್ದರಿಂದ ಕಾಕತಾಳೀಯ ಎನ್ನುವಂತೆ ಜೀವ ಉಳಿಸಲು ಕಾರಣವಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post