ಮಂಗಳೂರು, ಎ.7: ಎಂಸಿಸಿ ಬ್ಯಾಂಕ್ 2025-26ನೇ ವರದಿ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, 2026ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ 13 ಕೋಟಿ ರೂ. ಲಾಭ ಗಳಿಸಿದೆ. ಬ್ಯಾಂಕಿನ ಒಟ್ಟು ವ್ಯವಹಾರ 1,525 ಕೋಟಿ ರೂ.ಗೆ ತಲುಪಿದ್ದು, 23 ಶೇ. ವೃದ್ಧಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ನಿವ್ವಳ ಎನ್ಪಿಎ (Net NPA) ಒಟ್ಟು ಮುಂಗಡಗಳ 1.25% ಮಟ್ಟಕ್ಕೆ ತಗ್ಗಿಸಲು ಯಶಸ್ವಿಯಾಗಿದೆ. 2018ನೇ ವರ್ಷದಲ್ಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಪ್ರಸಕ್ತ ಆಡಳಿತ ಮಂಡಳಿಯ ಅವಧಿಯಲ್ಲಿ ರೂ.500 ಕೋಟಿ ಇದ್ದ ಬ್ಯಾಂಕಿನ ಒಟ್ಟು ವ್ಯವಹಾರ ಕಳೆದ ಏಳೂವರೆ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದು 114 ವರ್ಷದ ಇತಿಹಾಸವಿರುವ ಬ್ಯಾಂಕಿನ ಚರಿತ್ರೆಯಲ್ಲಿಯೇ ದಾಖಲೆ ಎಂದವರು ತಿಳಿಸಿದ್ದಾರೆ.
ಬ್ಯಾಂಕಿನ ನಿವ್ವಳ ಮೌಲ್ಯ ರೂ.83.76 ಕೋಟಿಯಿಂದ ರೂ.91.80 ಕೋಟಿಗೆ ಏರಿಕೆಯಾಗಿದೆ. ಬ್ಯಾಂಕ್ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಠೇವಣಿಗಳು ಹಾಗೂ ಸಾಲಗಳ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಿದೆ. ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.285 ಕೋಟಿಗಳ ಒಟ್ಟು ವ್ಯವಹಾರ ವಹಿವಾಟನ್ನು ದಾಖಲಿಸಿದೆ.
ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಎಂಬ ಕರಾವಳಿ ಜಿಲ್ಲೆಗಳಲ್ಲೇ ಸೇವೆ ನೀಡುತ್ತಿದ್ದ ಬ್ಯಾಂಕ್, ಇದೀಗ ರಾಜ್ಯಾದ್ಯಂತ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೈಂದೂರಿನಲ್ಲಿ 20ನೇ ಶಾಖೆ ಹಾಗೂ ಸಂತೆಕಟ್ಟೆಯಲ್ಲಿ 21ನೇ ಶಾಖೆಯನ್ನು ಆರಂಭಿಸಿದೆ. ಕುಲಶೇಖರ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸುಸಜ್ಜಿತ ಸೌಲಭ್ಯದೊಂದಿಗೆ ಸ್ಥಳಾಂತರಿಸಲಾಗಿದೆ. ಬೆಳ್ಮಣ್, ಸುರತ್ಕಲ್, ಉಡುಪಿ, ಬೆಳ್ತಂಗಡಿ, ಸಂತೆಕಟ್ಟೆ, ಕಿನ್ನಿಗೋಳಿ ಹಾಗೂ ಕುಲಶೇಖರದಲ್ಲಿ ಹೊಸ ಏಳು ಎಟಿಎಂಗಳನ್ನು ಸ್ಥಾಪಿಸಲಾಗಿದೆ. ಇದೀಗ ಎಟಿಎಂಗಳ ಸಂಖ್ಯೆ 15ಕ್ಕೆ ಏರಿದೆ.
2026-27ನೇ ವರ್ಷದಲ್ಲಿ 4 ಹೊಸ ಶಾಖೆಗಳನ್ನು ತೆರೆಯಲು ಯೋಜನೆ ಹಾಕಲಾಗಿದ್ದು, ಶಾಖೆಗಳ ಸಂಖ್ಯೆಗಳು 25ಕ್ಕೆ ಏರಲಿವೆ. ಈಗಾಗಲೇ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಮತ್ತು 23ನೇ ಶಾಖೆಯನ್ನು ಕಟಪಾಡಿಯಲ್ಲಿ ತೆರೆಯಲು ಅನುಮತಿ ಸಿಕ್ಕಿರುತ್ತದೆ. ಕರ್ನಾಟಕದಲ್ಲಿ ಎನ್ಆರ್ಐ ಸೌಲಭ್ಯವನ್ನು ಹೊಂದಿರುವ ಎರಡನೇ ನಗರ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಎಂಸಿಸಿ ಬ್ಯಾಂಕ್ ಪಾತ್ರವಾಗಿದೆ ಎಂದವರು ತಿಳಿಸಿದರು.
ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. 2025–26 ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.872.88 ಕೋಟಿ ಠೇವಣಿಗಳನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 23.74% ಏರಿಕೆ ಕಂಡಿದೆ. ರೂ.652.06 ಕೋಟಿ ಸಾಲ ನೀಡಿದ್ದು, 21.79% ವೃದ್ಧಿಸಿದೆ. ದುಡಿಯುವ ಬಂಡವಾಳ ರೂ.1008.97 ಕೋಟಿ (21.52% ವೃದ್ಧಿ) ಮತ್ತು ಷೇರು ಬಂಡವಾಳ ರೂ.34.08 ಕೋಟಿ ಆಗಿದೆ. ಒಟ್ಟು ಎನ್ಪಿಎ ಪ್ರೊವಿಷನ್ ಕವರೇಜ್ ಅನುಪಾತ 68.87% ಆಗಿದೆ. ಬ್ಯಾಂಕಿನ ಸಿಆರ್ಎಆರ್ (CRAR) 31 ಮಾರ್ಚ್ 2026ರ ವೇಳೆಗೆ 17% ಆಗಿದ್ದು, ನಿಗದಿಪಡಿಸಿದ 12.00% ಮಾನದಂಡಕ್ಕಿಂತ ಹೆಚ್ಚಾಗಿದೆ. 31 ಮಾರ್ಚ್ 2026ರ ವೇಳೆಗೆ ಬ್ಯಾಂಕಿನ ಒಟ್ಟು ವ್ಯವಹಾರ ರೂ.1525 ಕೋಟಿಗೆ ಏರಿಕೆಯಾಗಿದೆ.
ಮುಂದಿನ ಯೋಜನೆಗಳು
♦ ಜೂನ್ ಅಂತ್ಯದೊಳಗೆ ದೇರಳಕಟ್ಟೆ (ದ.ಕ. ಜಿಲ್ಲೆ)ಯಲ್ಲಿ 22ನೇ ಶಾಖೆ ಆರಂಭಿಸುವುದು.
♦ ಮಂಗಳೂರು (ಮೋರ್ಗನ್ಸ್ ಗೇಟ್) ಶಾಖೆಯನ್ನು ಜುಲೈ ಅಂತ್ಯದೊಳಗೆ ಸ್ಥಳಾಂತರಗೊಳಿಸುವುದು.
♦ ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿ (ಉಡುಪಿ ಜಿಲ್ಲೆ)ಯಲ್ಲಿ 23ನೇ ಶಾಖೆ ಆರಂಭಿಸುವುದು.
♦ ಕಾರ್ಕಳ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡುವುದು.
♦ ಮೂಡುಬಿದಿರೆ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ನೆಲ ಮಹಡಿಗೆ ಸ್ಥಳಾಂತರ ಮಾಡುವುದು.
♦ ಮಾರ್ಚ್ ಅಂತ್ಯದೊಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಆರಂಭಗೊಳಿಸುವುದು.
♦ ಮಾರ್ಚ್ ಅಂತ್ಯದೊಳಗೆ ಮಂಗಳೂರಿನಲ್ಲಿ ಸಿಲ್ವರ್ ಶಾಖೆ (25ನೇ ಶಾಖೆ) ಆರಂಭ
♦ 3 ನಗದು ಠೇವಣಿ ಮತ್ತು ವಿತರಣೆ (Cash Deposit and Dispenser) ಎಟಿಎಂ ಯಂತ್ರಗಳ ಸ್ಥಾಪನೆ
ಬ್ಯಾಂಕ್ ವಿವಿಧ ಹಣಕಾಸು ಉತ್ಪನ್ನಗಳನ್ನು ಒದಗಿಸುತ್ತಿದ್ದು, ಕಡಿಮೆ ದರದಲ್ಲಿ ಲಾಕರ್ ಸೌಲಭ್ಯ, ದೇಶೀಯ ಹಾಗೂ ವಿದೇಶಿ ಶಿಕ್ಷಣ ಸಾಲಗಳು, ಎಂಎಸ್ಎಂಇ ಸಾಲಗಳು, ವಾಹನ ಸಾಲಗಳು, ಗೃಹ ಸಾಲಗಳು, ಮನೆ ದುರಸ್ತಿ, ಮದುವೆ ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಾಲಗಳನ್ನು ನೀಡುತ್ತದೆ. ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಉಚಿತವಾಗಿ ಲಭ್ಯವಿವೆ.
ಬ್ಯಾಂಕಿನಲ್ಲಿನ ಠೇವಣಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಂತೆ ಡಿಪಾಸಿಟ್ ಇನ್ಸುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇರ್ಷನ್ (DICGC) ಮೂಲಕ ವಿಮೆಗೊಳಿಸಲಾಗಿದೆ.
ಈ ಸಾಧನೆಗೆ ಸದಸ್ಯರು ಮತ್ತು ಗ್ರಾಹಕರ ವಿಶ್ವಾಸ, ಸಿಬ್ಬಂದಿಯ ಸಮರ್ಪಿತ ಸೇವೆಯೇ ಪ್ರಮುಖ ಕಾರಣವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿಯೂ ಇದೇ ರೀತಿಯ ಬೆಂಬಲದೊಂದಿಗೆ ಇನ್ನಷ್ಟು ಸಾಧನೆಗಳನ್ನು ಮಾಡುವತ್ತ ಬ್ಯಾಂಕ್ ನಿರೀಕ್ಷೆ ಹೊಂದಿದೆ ಎಂದು ಅನಿಲ್ ಲೋಬೊ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರೂ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ, ಐರಿನ್ ರೆಬೆಲ್ಲೊ, ಡಾನಫ್ರೀಡಾ ಡಿಸೋಜ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕ ಸುನೀಲ್ ಮಿನೇಜಸ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post