ಮಂಗಳೂರು: ಬಿಜೆಪಿಯ ಹಿರಿಯ ಮುಖಂಡ ಸತೀಶ್ ಪ್ರಭು ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಸತೀಶ್ ಪ್ರಭು ಅವರು ರಜತ್ ಆರ್.ಕಾಮತ್, ದೀಕ್ಷಾ ಕಾಮತ್ ಮತ್ತು ಸಂತೋಷ್ ಶೆಟ್ಟಿ ಅವರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು, ಬಿಜೆಪಿ ಮುಳುಗುತ್ತಿರುವ ಹಡಗು. ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸುನಾಮಿ ರೀತಿಯಲ್ಲಿ ಬರುತ್ತಿದ್ದಾರೆ. 47 ಮಂದಿ ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್, ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ 6 ಮಂದಿ ವಿಧಾನಪರಿಷತ್ ಸದಸ್ಯರಿದ್ದಾರೆ. ಬಿಜೆಪಿ ಮುಳುಗತ್ತಿದ್ದು ಸದ್ಯ ಪೂರ್ಣ ಮುಳುಗುವುದರಲ್ಲಿ ಸಂಶಯವಿಲ್ಲ. ಈ ಬಾರಿ ಎಲ್ಲೆಡೆಯೂ ಜನರಿಂದ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್ ಸರಕಾರ ರಚಿಸುವುದರಲ್ಲಿ ಯಾರಿಗೂ ಸಂಶಯ ಬೇಡ ಎಂದು ಹೇಳಿದರು.
32 ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಜನಹಿತ ಕೆಲಸಕ್ಕಾಗಿ ಭಾರತೀಯ ಜನತಾ ಪಾರ್ಟಿಯನ್ನು ಆಯ್ದುಕೊಂಡಿದ್ದೆನು. ಯಾವುದೇ ಅಧಿಕಾರಕ್ಕಾಗಿ ಪಕ್ಷದಲ್ಲಿ ಇದ್ದುದಲ್ಲ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಜನಹಿತ ಕಾರ್ಯ ಅಸಾಧ್ಯವೆಂದು ಮನಗಂಡಿದ್ದರಿಂದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಸತೀಶ್ ಪ್ರಭು, ಮಂಗಳೂರಿನ ಬಿಜೆಪಿ ಬಗ್ಗೆ ಹೊಂದಿದ್ದರು. ಮಂಗಳೂರಿನ ಆರೆಸ್ಸೆಸ್ ಕಚೇರಿ ಸಂಘನಿಕೇತನ, ಅಲ್ಲಿನ ಗಣೇಶೋತ್ಸವದಲ್ಲಿ ಸಕ್ರಿಯವಾಗಿದ್ದ ಮತ್ತು ಗಣೇಶೋತ್ಸವ ಸಮಿತಿಯಲ್ಲಿ ಟ್ರಸ್ಟಿಯೂ ಆಗಿದ್ದ ಸತೀಶ್ ಪ್ರಭು ಅವರನ್ನು ಬಿಜೆಪಿಯಲ್ಲಿ ಬದಿಗೆ ಸರಿಸಲಾಗಿತ್ತು. ಒಂದು ವರ್ಷದ ಹಿಂದೆ ಜಿಎಸ್ ಬಿ ಸಮುದಾಯಕ್ಕೆ ಸೇರಿದ ರಥಬೀದಿಯ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಹುದ್ದೆಗಳಿಗೆ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಶಾಸಕರ ವಿರುದ್ಧ ಪಾಳಯದಲ್ಲಿ ನಿಂತು ಸತೀಶ್ ಪ್ರಭು ಜಯಿಸಿದ್ದು ಜಿಎಸ್ ಬಿ ನಾಯಕರು, ಸಮುದಾಯದ ಒಳಗೆ ಸಂಚಲನ ಸೃಷ್ಟಿಸಿತ್ತು.
Discover more from Coastal Times Kannada
Subscribe to get the latest posts sent to your email.







Discussion about this post