ಪುತ್ತೂರು: ‘ಬಿಜೆಪಿ ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಗೌಡ ಪರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಬಿಜೆಪಿ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ಯೋಗಿ ಆದಿತ್ಯನಾಥ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು ದೇವಸ್ಥಾನದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ರೋಡ್ ಶೋ ನಡೆಸಿದರು. ಬಳಿಕ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲ ಹೆಸರನ್ನು ಉಲ್ಲೇಖಿಸದೆಯೇ, ‘ಕರ್ನಾಟಕಕ್ಕೆ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ ಇದೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡೋಣ. ಆಶಾ ತಿಮ್ಮಪ್ಪಗೌಡ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸೋಣ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸುರಕ್ಷಿತವಾಗಿದ್ದು, ಜಗತ್ತಿನಲ್ಲೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ದೇಶವು ಎಲ್ಲರನ್ನು ಒಳಗೊಂಡ ವಿಕಾಸದತ್ತ ಹೆಜ್ಜೆ ಇಡುತ್ತಿದ್ದು, ಪ್ರತಿಯೊಬ್ಬ ಬಡವರಿಗೆ, ಯುವಕರಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ಇದರ ಪ್ರಯೋಜನ ಸಿಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ, ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಕರ್ನಾಟಕವೂ ಅಭಿವೃದ್ಧಿಯಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು ಜನರು ಅವಕಾಶ ಕಲ್ಪಿಸಬಾರದು’ ಎಂದರು.
‘ಬಿಜೆಪಿ ಶ್ರದ್ಧೆಯನ್ನು ಗೌರವಿಸುತ್ತಿದ್ದರೆ ಕಾಂಗ್ರೆಸ್ ಧಾರ್ಮಿಕ ಶ್ರದ್ಧೆಯ ಅಪಮಾನ ಮಾಡುತ್ತಿದೆ. ಸಾಮಾಜಿಕ ಕಾರ್ಯನಿರತ ರಾಷ್ಟ್ರವಾದಿ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸಿ ರಾಷ್ಟ್ರದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ರಾಷ್ಟ್ರವಾದಿ ನಾಗರಿಕರು ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಯೋಗಿ ಆದಿತ್ಯನಾಥ ಕಿಡಿ ಕಾರಿದರು. ‘ರಾಮನ ಅಸ್ತಿತ್ವವವನ್ನೇ ಈ ಹಿಂದೆ ಕಾಂಗ್ರೆಸ್ ಪ್ರಶ್ನಿಸಿತ್ತು. ವಾಸ್ತವದಲ್ಲಿ ಶ್ರೀರಾಮ ಇರಲೇ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲೂ ಪ್ರಮಾಣಪತ್ರ ಸಲ್ಲಿಸಿತ್ತು. ಪಿಎಫ್‌ಐ ನಿಷೇಧಿಸಿದಂತೆ ಬಜರಂಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ’ ಎಂದರು. ‘ಬಜರಂಗದಳವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ. ಭಾರತ ಮಾತೆಗಾಗಿ ಬದುಕನ್ನೇ ಸಮರ್ಪಿಸಿದ ಯುವಜನರ ಸಂಘಟನೆ. ಸನಾತನ ನಂಬಿಕೆಗಳನ್ನು ಗೌರವಿಸುವ ಸಾಮಾಜಿಕ ಕಾರ್ಯಗಳಿಗೆ ಕೊಡುಗೆ ನೀಡುತ್ತಿರುವ ಸಂಘಟನೆ’ ಎಂದು ಸ್ಪಷ್ಟಪಡಿಸಿದರು. ಜೈ ಕರೋ ವೀರ್ ಭಜರಂಗಿ ಹರ್ ಹರ್ ಮಹಾದೇವ್ ಘೋಷಣೆಗಳನ್ನು ಯೋಗಿಯವರು ಕೂಗಿದರು. ಸಭಿಕರು ಅದನ್ನು ಪುನರುಚ್ಚರಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಶಾಸಕ ಸಂಜೀವ ಮಠಂದೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಜೊತೆಯಲ್ಲಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post