ಈಗಾಗಲೇ ಸಾಕಷ್ಟು ಸ್ಪೋರ್ಟ್ಸ್ ಬಯೋಪಿಕ್ ಸಿನಿಮಾಗಳು ಬಂದೋಗಿವೆ. ಅದರಲ್ಲಿ ಕೆಲವರು ಗೆದ್ದಿದ್ದರೆ ಮತ್ತೆ ಕೆಲವು ಸೋಲುಂಡಿವೆ. ‘ಧೋನಿ’, ‘ದಂಗಲ್’, ‘ಭಾಗ್ ಮಿಲ್ಕಾ ಭಾಗ್’, ‘ಮೇರಿಕೋಮ್’ ರೀತಿಯ ಸಿನಿಮಾಗಳು ಸಕ್ಸಸ್ ಕಂಡಿವೆ. ಆದರೆ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’, ’83’ ಹಾಗೂ ‘800’ ರೀತಿಯ ಸಿನಿಮಾಗಳು ನಿರಾಸೆ ಮೂಡಿಸಿದ್ದವು.
ಈ ವಾರ ಬಾಲಿವುಡ್‌ನಲ್ಲಿ ‘ಮೈದಾನ್’ ಸಿನಿಮಾ ತೆರೆಗೆ ಬಂದಿದೆ. ಭಾರತದ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಜೀವನವನ್ನಾಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಸಿನಿಮಾ ತೆರೆಗಪ್ಪಳಿಸಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಮಿತ್ ಶರ್ಮಾ ಚಿತ್ರಕ್ಕೆ ಆಕ್ಷನ ಕಟ್ ಹೇಳಿದ್ದು ಅಜಯ್ ದೇವಗನ್, ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
‘ಮೈದಾನ್’ ಕಥೆ : ಅದು 50ರ ದಶಕದ ಆರಂಭ. ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಫುಟ್ಬಾಲ್ ತಂಡ ಯುಗೊಸ್ಲಾವಿಯ ಎದುರು ಹೀನಾಯವಾಗಿ ಸೋಲನುಭವಿಸುತ್ತದೆ. ಆ ಪಂದ್ಯದಲ್ಲಿ ಯುಗೊಸ್ಲಾವಿಯ ತಂಡ 10 ಗೋಲ್ ಗಳಿಸುತ್ತದೆ. ಸರಿಯಾಗಿ ಧರಿಸಲು ಶೂಗಳು ಇಲ್ಲದೇ ಭಾರತೀಯ ಆಟಗಾರರು ಗಾಯಗೊಳ್ಳುತ್ತಾರೆ. ಒಲಂಪಿಕ್ಸ್‌ನಲ್ಲಿ ಭಾರತ ತಂಡದ ಸೋಲು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗುತ್ತದೆ. ಭಾರತ ಫುಟ್ಬಾಲ್ ಈ ರೀತಿ ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ ಕೋಚ್ ಸೈಯದ್ ಅಬ್ದುಲ್ ರಹೀಮ್(ಅಜಯ್ ದೇವಗನ್) ತಂಡ ಕಟ್ಟುವ ಪ್ರಯತ್ನ ಆರಂಭಿಸುತ್ತಾರೆ. ಮುಂದೆ ಸೈಯದ್ ಹೇಗೆ ಆಟಗಾರರ ಬೆಂಬಲಕ್ಕೆ ನಿಂತರು. ಸೋಲಿನಿಂದ ಪಾಠ ಕಲಿತ ತಂಡವನ್ನು ಮತ್ತೆ ಹೇಗೆ ಬಲಿಷ್ಠವಾಗಿ ಕಟ್ಟಿದರು. ಅಲ್ಲಿಂದ ಮುಂದೆ ಫುಟ್ಬಾಲ್ ಟೂರ್ನಿಗಳಲ್ಲಿ ಭಾರತ ತಂಡದ ಪ್ರದರ್ಶನ ಹೇಗಿತ್ತು? ಈ ಹಾದಿಯಲ್ಲಿ ಸಯ್ಯದ್ ಹಾಗೂ ಆಟಗಾರರಿಗೆ ಎದುರಾದ ಸಮಸ್ಯೆಗಳೇನು? ಅದನ್ನೆಲ್ಲಾ ಹೇಗೆ ಮೆಟ್ಟಿನಿಂತರು ಎನ್ನುವುದು ‘ಮೈದಾನ್’ ಕಥೆ.
ಸಿನಿಮಾ ಹೇಗಿದೆ? : 1951-62 ನಡುವೆ ಒಂದು ದಶಕದ ಕಾಲ ಭಾರತೀಯ ಫುಟ್ಬಾಲ್ ತಂಡದ ಸುವರ್ಣ ಯುಗ ಎನ್ನಲಾಗುತ್ತದೆ. ಆಗ ಸೈಯದ್ ಅಬ್ದುಲ್ ರಹೀಮ್ ಭಾರತ ತಂಡದ ತರಬೇತುದಾರಾಗಿದ್ದರು. ದೇಶದಾದ್ಯಂತ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿ ತಂಡ ಕಟ್ಟಿದ್ದರು. 1956ರಲ್ಲಿ ಭಾರತ ತಂಡ ಸೆಮಿಫೈನಲ್‌ವರೆಗೂ ತಲುಪಿತ್ತು. ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಗೌರವ ರಹೀಮ್‌ಗೆ ಸಲ್ಲುತ್ತದೆ. ಫುಟ್ಬಾಲ್ ಸುತ್ತಾ ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ನಡೆದಿರಲಿಲ್ಲ. ಹಾಗಾಗಿ ‘ಮೈದಾನ್’ ಒಂದೊಳ್ಳೆ ಪ್ರಯತ್ನ ಎನ್ನಬಹುದು. ಇಂತಹ ಸ್ಪೋರ್ಟ್ಸ್ ಡ್ರಾಮಾ ಚಿತ್ರಗಳಲ್ಲಿ ಎಮೋಷನ್ಸ್ ಬಹಳ ಮುಖ್ಯವಾಗುತ್ತದೆ. ಡ್ರಾಮಾ, ಹೋರಾಟ, ಭಾವನೆಗಳ ಸಮ್ಮಿಳಿತವಿದ್ದರೆ ಚೆನ್ನಾಗಿರುತ್ತದೆ. ಸರಿ- ತಪ್ಪು ಎರಡನ್ನೂ ತೋರಿಸಬೇಕು. ‘ಮೈದಾನ್’ ಎಮೋಷನಲ್ ಆಗಿ ಸಾಗುವ ಸಿನಿಮಾ. ಕೋಚ್‌ಗೆ ಆದ ಅವಮಾನ, ಫೆಡರೇಷನ್ ನ್ಯೂನ್ಯತೆಗಳು ಹೀಗೆ ಸಾಕಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ಚಿತ್ರದ ಫಸ್ಟ್ ಹಾಫ್ ಸೈಯದ್ ಫುಟ್ಬಾಲ್ ತಂಡ ಕಟ್ಟುವುದರ ಸುತ್ತಾ ಸಾಗುತ್ತದೆ. ಹಾಗಾಗಿ ಕೊಂಚ ಸ್ಲೋ ಎನಿಸುತ್ತದೆ. ಆದರೆ ಸೆಕೆಂಡ್ ಹಾಫ್ ರೋಚಕವಾಗಿ ಕಾಣುತ್ತದೆ. ಫುಟ್ಬಾಲ್ ತಂಡ ಸಿದ್ಧಪಡಿಸುವುದರ ಜೊತೆಗೆ ಕೋಚ್ ಸೈಯದ್ ವೈಯಕ್ತಿಕ ಜೀವನವನ್ನು ಹೇಳುತ್ತಾ ಸಾಗಲಾಗಿದೆ. ಆಟಗಾರರನ್ನು ಉದ್ದೇಶಿಸಿ ಸೈಯದ್ ಸ್ಪೀಚ್ ಬಹಳ ಸೊಗಸಾಗಿದೆ. ಇನ್ನು ಫುಟ್ಬಾಲ್ ಪಂದ್ಯಗಳನ್ನು ಸಹಜವಾಗಿಯೇ ತೋರಿಸಲಾಗಿದೆ.
ಕೊನೆ ಕೊನೆಗೆ ಭಾರತ ಫುಟ್ಬಾಲ್ ತಂಡ ಪ್ರತಿ ಪಂದ್ಯ ಗೆದ್ದಾಗ, ಪ್ರತಿ ಗೋಲ್ ಹೊಡೆದಾಗ ನೋಡುತ್ತಿರುವ ನಾವೇ ಗೆದ್ದಂತೆ ಗೋಲ್ ಹೊಡೆದು ಸಂಭ್ರಮಿಸುವಂತೆ ಸಿನಿಮಾ ಆವರಿಸಿಕೊಳ್ಳುತ್ತದೆ. ಫುಟ್ಬಾಲ್ ಪಂದ್ಯಗಳನ್ನು ರೋಚಕವಾಗಿ ತೋರಿಸಿರುವುದು ಮಾತ್ರವಲ್ಲ, ನಮ್ಮ ದೇಶ ಯಾಕೆ ಎಲ್ಲಾ ಕ್ರೀಡೆಗಳಲ್ಲಿ ಸರಿಯಾದ ಪ್ರದರ್ಶನ ತೋರುತ್ತಿಲ್ಲ ಎನ್ನುವುದನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ನಡೆದಿದೆ.
ಕಲಾವಿದರ ಅಭಿನಯ : ನಟ ಅಜಯ್ ದೇವಗನ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಆದರೆ ‘ಮೈದಾನ್’ ಅವರ ಮಾಗಿದ ನಟನೆಗೆ ಒಳ್ಳೆ ವೇದಿಕೆ. ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ಆವರಿಸಿಕೊಂಡಿದ್ದಾರೆ. ತಂಡಕ್ಕೆ ಉತ್ತೇಜನ ನೀಡಿ ಬೆಳೆಸುವುದು ಮಾತ್ರವಲ್ಲ, ಎಮೋಷನಲ್ ಸನ್ನಿವೇಶಗಳಲ್ಲಿ ಕೂಡ ಇಷ್ಟವಾಗುತ್ತಾರೆ. ರಾಯ್ ಚೌಧರಿಯಾಗಿ ಗಜರಾಜ್ ರಾವ್ ಗಮನ ಸೆಳೆಯುತ್ತಾರೆ. ಸೈಯದ್ ಮಡದಿ ಸಾಯಿರಾ ರಹೀಮ್ ಆಗಿ ಪ್ರಿಯಾಮಣಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post