ಮಂಗಳೂರು, ಜುಲೈ 6: ಮಂಗಳೂರಿನಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ರಾಜಕಾರಣ ಮಾಡಿದ್ದ ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ನಗರದ ಸರ್ಕ್ಯೂಟ್ ಹೌಸ್ ಬಳಿಯಿಂದ ಬಿಜೈ ಸರ್ಕಲ್ ವರೆಗಿನ ರಸ್ತೆಗೆ ಇಡಲಾಗಿದೆ. ಈ ರಸ್ತೆಯನ್ನು ಮಹಾನಗರ ಪಾಲಿಕೆ ವತಿಯಿಂದ ಅಧಿಕೃತವಾಗಿ “ಜಾರ್ಜ್ ಫೆರ್ನಾಂಡಿಸ್ ರಸ್ತೆ” ಎಂದು ನಾಮಕರಣ ಮಾಡಲಾಗಿದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವಾನ್ ಡಿಸೋಜ, ಭರತ್ ಶೆಟ್ಟಿ ಮತ್ತಿತರರ ಉಪಸ್ಥಿತಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ರಸ್ತೆ ನಾಮಕರಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿನಲ್ಲಿ ಜನಿಸಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದವರು ಜಾರ್ಜ್ ಫೆರ್ನಾಂಡಿಸ್. ಚಿಕ್ಕಂದಿನಲ್ಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ಅವರು ಕ್ರಿಶ್ಚಿಯನ್ ಪಾದ್ರಿಯಾಗಬೇಕೆಂದು ಬಯಸಿದ್ದರು. ಆದರೆ ಅವರು ದೇಶದ ಅಮೂಲ್ಯ ಆಸ್ತಿಯಾದರು. ಉದ್ಯೋಗವನ್ನು ಅರಸಿ ಮುಂಬೈಗೆ ಹೋದ ಅವರು ಅಲ್ಲಿ ಕಾರ್ಮಿಕ ನಾಯಕನಾಗಿ ಕೊನೆಗೆ ದೇಶವೇ ಮೆಚ್ಚುವಂತಹ ರಾಜಕಾರಣಿಯಾದರು ಎಂದು ಸ್ಮರಿಸಿದರು.
ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ಮಂಗಳೂರಿನ ಮಣ್ಣಿನ ಮಗ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ನುಡಿದಂತೆ ನಡೆದ ಶ್ರೇಷ್ಠ ರಾಜಕಾರಣಿ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಅವರ ಜೀವನಗಾಥೆ ಮುಂದಿನ ಹಲವು ತಲೆಮಾರುಗಳಿಗೆ ಆದರ್ಶ ಮತ್ತು ಸ್ಪೂರ್ತಿಯಾಗಿದೆ. ಇಂತಹ ಶ್ರೇಷ್ಠ ವ್ಯಕ್ತಿತ್ವದ ಹೆಸರನ್ನು ಮಂಗಳೂರಿನ ಈ ರಸ್ತೆಗೆ ಇಡುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ. ಜಾರ್ಜ್ ಅವರು ರಕ್ಷಣಾ ಸಚಿವರಾಗಿದ್ದಾಗ ದೆಹಲಿ ಪೆರೇಡ್ ನಲ್ಲಿ ನಾನು ಅವರನ್ನು ಹತ್ತಿರದಿಂದ ನೋಡಿದ್ದೆ.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಮೇಯರ್ಗಳಾದ ಭಾಸ್ಕರ ಮೊಯ್ಲಿ, ಶಶಿಧರ ಹೆಗ್ಡೆ, ಉಪಮೇಯರ್ ಸುನೀತ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ,ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಣೇಶ್ ಕುಲಾಲ್ ಮತ್ತು ಭರತ್ ಕುಮಾರ್ ವರುಣ್ ಚೌಟ, ಲೋಹಿತ್ ಅಮೀನ್ ಸದಸ್ಯರಾದ ಲ್ಯಾನ್ಸ್ಲೋಟ್ ಪಿಂಟೊ, ಶಕೀಲಾ ಕಾವ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post