ಮಹಾನಗರ: ಮಂಗಳೂರು ನಗರ ನೆಹರು ಮೈದಾನ ಬಳಿ ಇರುವ ಫುಟ್ಬಾಲ್ ಮೈದಾನವನ್ನು ಮೇಲ್ದರ್ಜೆಗೇರಿಸ ಲಾಗುತ್ತಿದ್ದು, ಆಸ್ಟ್ರೊ ಟರ್ಫ್ ಅಳವಡಿಕೆ ಕೆಲಸ ಬಿರುಸಿನಿಂದ ಸಾಗಿದೆ. ಆ ಮೂಲಕ ಮಂಗಳೂರಿನಲ್ಲಿ ಟರ್ಫ್ ಕೋರ್ಟ್ ನಿರ್ಮಾಣದ ಕನಸು ಬಹುತೇಕ ಈಡೇರಿದಂತಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಸುಮಾರು 2.5 ಕೋ. ರೂ. ವೆಚ್ಚದಲ್ಲಿ ಟರ್ಫ್ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಮೈದಾನ ಕ್ರೀಡಾಪಟುಗಳಿಗೆ ಲಭ್ಯವಾಗಲಿದೆ. ಸರಿಸುಮಾರು 90 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೈದಾನಕ್ಕೆ ಆಸ್ಟ್ರೊ ಟರ್ಫ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಆಸ್ಟ್ರೊ ಟರ್ಫ್ ಅಳವಡಿಕೆಗೂ ಮೊದಲು ಮೈದಾನದ ನಿರ್ವಹಣೆಯ ಕೆಲಸ ಕಾರ್ಯಗಳನ್ನು ನಡೆಸಲಾಗಿದ್ದು, ಭಾರೀ ಮಳೆಯ ಸಂದರ್ಭದಲ್ಲಿ ಅಲ್ಪ ಅಡೆತಡೆ ಉಂಟಾಗಿತ್ತು. ಮಳೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಮತ್ತೆ ಕೆಲಸ ಕಾರ್ಯಗಳು ಚುರುಕುಗೊಂಡಿವೆ. ಕ್ರೀಡಾಂಗಣ ಸಮತಟ್ಟುಗೊಳಿಸಿ ಮಳೆ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಅನೇಕ ಫುಟ್ಬಾಲ್ ಆಟಗಾರರು ಇದ್ದು, ಅನೇಕ ಯುವಕರಲ್ಲೂ ಫುಟ್ಬಾಲ್ ಆಸಕ್ತಿ ಇದೆ. ಆದರೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ವೇಳೆ ಟರ್ಫ್ ಮೈದಾನದಲ್ಲಿನ ಅನುಭವದ ಕೊರತೆಯಿಂದ ಹಿನ್ನಡೆಯಾಗುತ್ತಿದೆ. ಸಾಮಾನ್ಯ ಮೈದಾನ ಹಾಗೂ ಟರ್ಫ್ ಅಳವಡಿಸಿ ಕೋರ್ಟ್‌ಗಳಲ್ಲಿ ವ್ಯತ್ಯಾಸವಿರುವ ಕಾರಣದಿಂದಾಗಿ ಮಂಗಳೂರಿನ ಫುಟ್ಬಾಲ್ ಮೈದಾನಕ್ಕೆ ಟರ್ಫ್ ಅಳವಡಿಸಬೇಕೆಂಬ ಆಗ್ರಹ ಅನೇಕ ವರ್ಷಗಳಿಂದ ಇತ್ತು. ಇದೀಗ ಮೈದಾನಕ್ಕೆ ಟರ್ಫ್ ಅಳವಡಿಸಲಾಗುತ್ತಿದೆ. ಸುಮಾರು 12 ಅಡಿ ಎತ್ತರವಿರುವ ತಡೆ ಬೇಲಿ ನಿರ್ಮಿ ಸುವ ಕೆಲಸ ಶುರುವಾಗಿದೆ. ಬಹುತೇಕ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಮೈದಾನಕ್ಕೆ ಟರ್ಫ್ ಅಳವಡಿಸುವ ಕಂಪೆನಿಗಳಿಗೆ ಫುಟ್ಬಾಲ್ ಅಸೋಶಿಯೇಷನ್(ಫೀಫಾ) ಅನುಮೋದನೆ ಕಡ್ಡಾಯ. ಅವರ ನಿರ್ದೇಶನದಂತೆ ಟರ್ಫ್ ಅಳವಡಿಕೆ ನಡೆಯುತ್ತದೆ. ಮಂಗಳೂರಿಗೆ ತೈವಾನ್‌ನಿಂದ ಟರ್ಫ್ ತರಿಸಲಾಗಿದೆ. ಗುಣಮಟ್ಟ ಕಾಯ್ದುಕೊಳ್ಳಲು ಅಧಿಕೃತ ಏಜೆನ್ಸಿ ಮೂಲಕವೇ ಟರ್ಫ್ ಅಳವಡಿಸಲಾಗುತ್ತದೆ. ಇಂಡಿಪೆಂಡೆನ್ಸ್ ಕಪ್ ಪಂದ್ಯಾಟ ಮುಂದಿನ ತಿಂಗಳು ನಡೆಯಲಿದ್ದು, ಅದಕ್ಕೂ ಮೊದಲು ಮೈದಾನದ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲೇ ಮೈದಾನ ಆಟಗಾರರಿಗೆ ಸಿಗುವ ನಿರೀಕ್ಷೆ ಇದೆ.
Discover more from Coastal Times Kannada
Subscribe to get the latest posts sent to your email.
Discussion about this post