ಬೆಳ್ತಂಗಡಿ : ಧರ್ಮಸ್ಥಳ ಪ್ರದೇಶದ ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಅಕ್ರಮವಾಗಿ ಮೃತದೇಹ ಹೂತು ಹಾಕಲಾಗಿದೆ ಎಂದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ಅಲಿಯಾಸ್ ಭೀಮನನ್ನು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.16 ದಿನಗಳ ಎಸ್‌ಯಟಿ ಕಸ್ಟಡಿ ಮುಗಿದ ಬಳಿಕ ಶನಿವಾರ ಬೆಳ್ತಂಗಡಿ ನ್ಯಾಯಾಲಯ ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಭದ್ರತೆ ಕಾರಣದಿಂದ ಹೊರ ಜಿಲ್ಲೆಯ ಜೈಲಿಗೆ ಸ್ಥಳಾಂತರಿಸಲಾಗಿದೆ.
ಚಿನ್ನಯ್ಯನ ಹೇಳಿಕೆಗಳ ಆಧಾರದಲ್ಲಿ ಗಿಂಣ್ ಮಟ್ಟೆಣ್ಣವರ್, ಜಯಂತ್ ಬಿ., ಯೂಟ್ಯೂಬರ್ ಗಳಾದ ಸಮೀನ್ ಎಂ.ಡಿ. ಅಭಿಷೇಕ್ ವಿಚಾರಣೆ ನಡೆಸಲಾಗಿದೆ. ಸೌಜನ್ಯಾ ನಾಪತ್ತೆ ಮತ್ತು ಶಂಕಾಸ್ಪದ ಸಾವು ವಿಚಾರದಲ್ಲಿ ಚಿನ್ನಯ್ಯನ ತನಿಖೆ ನಡೆಸುವಂತೆ ಸೌಜನ್ಯಾ ತಾಯಿ ಕುಸುಮಾವತಿ ದೂರು ನೀಡಿದ್ದರು. ಹೋರಾಟಗಾರ್ತಿ ಪ್ರಸನ್ನ ರವಿ ಚಿನ್ನಯ್ಯನ ಜೀವಕ್ಕೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಜಾಮೀನು ಅರ್ಜಿ ಸಲ್ಲಿಕೆ: ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿದ ವಕೀಲರು ಚಿನ್ನಯ್ಯನಿಗೆ ಜಾಮೀನು ನೀಡುವಂತೆ ಶನಿವಾರ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಲಾಗಿದೆ.
ಕೇರಳ ಸಂಸದನ ಭೇಟಿಯಾಗಿದ್ದ ಚಿನ್ನಯ್ಯ ತಂಡ : ಎಸ್‌ಐಟಿ ರಚನೆ ಆಗುವ ಮೊದಲೇ ದೂರುದಾರ ಚಿನ್ನಯ್ಯ ಮತ್ತು ತಂಡ ಕೇರಳದ ಸಂಸದರೊಬ್ಬರನ್ನು ಭೇಟಿ ಮಾಡಿ, ಸಮಾಲೋಚನೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಈ ವಿಷಯದ ಸತ್ಯಾಸತ್ಯತೆ ಬಗ್ಗೆ ಎಸ್ ಐಟಿ ತನಿಖೆ ನಡೆಸುತ್ತಿದೆ.
ಧರ್ಮಸ್ಥಳದ ಕಾಡಿನಿಂದ ಸಂಗ್ರಹಿಸಿದ್ದರು ಎನ್ನಲಾದ ತಲೆ ಬುರುಡೆಯನ್ನು ಸಂಸದನ ಮುಂದಿಟ್ಟು ನೂರಾರು ಶವಗಳನ್ನು ಹೂತ ಪ್ರಕರಣದ ಬಗ್ಗೆ ಮಾಡಬೇಕಾದ ಕಾನೂನು ಹೋರಾಟದ ಬಗ್ಗೆ ದೂರುದಾರ ಚಿನ್ನಯ್ಯ, ಹೋರಾಟಗಾರರಾದ ಜಯಂತ್ ಟಿ. ಮತ್ತು ಗಿರೀಶ್ ಮಟ್ಟೆಣ್ಣವರ್ ಕೇರಳದ ಸಂಸದರೊಬ್ಬರ ಜತೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
ಇದೇ ವೇಳೆ ಮನಾಫ್ ತಯಾರಿಸಿದ ಧರ್ಮಸ್ಥಳ ಕುರಿತ ವಿಡಿಯೊ ಕೂಡ ಯೂಟ್ಯೂಬ್ಗೆ ಅಪ್ ಲೋಡ್ ಆಗಿದ್ದು, ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಂಸದರು ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮನಾವ್‌ಗೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post