ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಪ್ರಮುಖರು ಸೋಮವಾರ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿಯಾಗಿ ಮನವಿ ಒಪ್ಪಿಸಿದ್ದಾರೆ.
ಮಂಗಳೂರಿನ ಹಳೆಯ ಕೇಂದ್ರ ಮಾರುಕಟ್ಟೆಯನ್ನು ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನೂತನ ಕೇಂದ್ರ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಗೋಮಾಂಸದ ಅಂಗಡಿಗೆ ಅವಕಾಶ ಇದೆ ಎಂದು ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಬೀಫ್ ಸ್ಟಾಲ್ಗೆ ಅವಕಾಶ ನೀಡದಂತೆ ಆಗ್ರಹಿಸಿದೆ. ಬಿಜೆಪಿ ಆಡಳಿತವಿರುವ ಪಾಲಿಕೆಯಲ್ಲಿ ಬೀಫ್ ಸ್ಟಾಲ್ಗೆ ಅವಕಾಶ ನೀಡಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷತ್ನಿಂದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರ ಮಾರುಕಟ್ಟೆಯಲ್ಲಿ 9 ಬೀಫ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿರುವುದು ಗಮನಕ್ಕೆ ಬಂದಿದ್ದು, ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.
ವಿಹಿಂಪ ರಾಜ್ಯ ಮುಖಂಡ ಎಂ.ಬಿ ಪುರಾಣಿಕ್ ಮಾತನಾಡಿ, ‘ಗೋವಧೆಗೆ ಸಂಪೂರ್ಣ ನಿಷೇಧ ಇರುವಾಗ ಆ ಅಂಗಡಿಗಳು ಹೇಗೆ ಬರುತ್ತದೆ. ಗೋ ಹತ್ಯೆ ಮಾಡದೇ ಮಾಂಸ ಮಾರಲು ಸಾಧ್ಯವಿಲ್ಲ. ತಾತ್ವಿಕವಾಗಿ ನಮ್ಮ ವಿರೋಧವಿದೆ’ ಎಂದು ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯಡಿ ಅಕ್ರಮ ಗೋಹತ್ಯೆ ಪತ್ತೆಯಾದರೆ, ಅಲ್ಲಿನ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಅದರಂತೆ, ಮಂಗಳೂರಿನ ಹಲವೆಡೆ ಕಾನೂನು ಕ್ರಮ ಜರುಗಿಸಲಾಗಿದೆ. ಇದರಿಂದ ಜನರಿಗೂ ಅರಿವು ಬಂದಿದ್ದು, ಅಕ್ರಮ ಗೋಹತ್ಯೆಗೆ ಕಡಿವಾಣ ಬೀಳಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು. ಶಿವಾನಂದ ಮೆಂಡನ್, ಗೋಪಾಲ ಕುತ್ತಾರ್, ಪುನೀತ್ ಅತ್ತಾವರ ಸೇರಿದಂತೆ ಹಲವರು ವಿಹಿಂಪ ನಿಯೋಗದಲ್ಲಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post