ಮಂಗಳೂರು, ಡಿ.6: ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಎಂಡಿಎಂಎ ಡ್ರಗ್ಸ್ ಪೂರೈಸುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ದಸ್ತಗಿರಿ ಮಾಡಿ, ಅವರಿಂದ 200 ಗ್ರಾಂ ಎಂಡಿಎಂಎಯನ್ನು ವಶಪಡಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಬಜ್ಪೆ ಪೊಲೀಸರು ದಸ್ತಗಿರಿ ಮಾಡಿದ್ದು, ಆರೋಪಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದರು.
ಬೆಂಗಳೂರು ಪುನೀತ್ ಲೇಔಟ್, ಅಂದ್ರಹಳ್ಳಿ, ವಿಶ್ವನೀಡಂ ಪೋಸ್ಟ್ ನಿವಾಸಿ ದರ್ಶನ್ ಕೆ.ಜಿ(25) ಹಾಗೂ ಮೂಲತಃ ನೈಜೀರಿಯಾ ನಿವಾಸಿ, ಬೆಂಗಳೂರಿನ ಬೆಟ್ಟ ಹಲಸೂರಿನಲ್ಲಿ ನೆಲೆಸಿದ್ದ ಚಿಕ ಜೋಸೇಫ್ ಇಝಿ ಎಂಬವರನ್ನು ವಶಕ್ಕೆ ಪಡೆದು ಅವರ ವಶದಿಂದ ರೂ. 10,00,000/- ಮೌಲ್ಯದ 200 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಮಾರುತಿ ಬಲೆನೋ ಕಾರು, 5 ಮೊಬೈಲ್ ಫೋನ್ ಗಳು, ವಿವಿಧ ಬ್ಯಾಂಕ್ ಗಳ 5 ಡೆಬಿಟ್ ಕಾರ್ಡ್ ಗಳು, 7 ಸಿಮ್ ಕಾರ್ಡ್ ಗಳು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಲಾಗಿದೆ. ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ. 18,25,500/- ಆಗಬಹುದು. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಆರೋಪಿ ಚಿಕ ಜೋಸೆಫ್ ಇಝಿ ಎಂಬಾತನು 2023ರ ಮೇ ತಿಂಗಳಲ್ಲಿ ಭಾರತಕ್ಕೆ ಉದ್ಯೋಗ ವೀಸಾದಲ್ಲಿ ಬಂದಿದ್ದನು. ಬೆಂಗಳೂರಿನ ಯಲಹಂಕದಲ್ಲಿ ನೈಜೀರಿಯಾ ಪ್ರಜೆಯ ಹೇರ್ ಕಟ್ಟಿಂಗ್ ಉದ್ಯೋಗ ಮಾಡುತ್ತಿದ್ದು, ಈ ಸಮಯ ಈತನ ವಿರುದ್ಧ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಮಾರು 4 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್‌ಎಂ, ಎಸ್ಸೈ ಸುದೀಪ್ ಎಂ.ವಿ., ಎಎಸ್ಸೈ ರಾಮ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post