ಬೆಂಗಳೂರು, ಜ. 08: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟ ಮಾಡಿದೆ. ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದು, ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಬಾರಿ ಜಾತ್ಯತೀತ ಪಕ್ಷಗಳು ಎಂದು ಹೇಳಿಕೊಂಡು ಮತ ಪಡೆದಂತಹ ರಾಜಕೀಯ ಪಕ್ಷಗಳು ಮುಂದೆ ಬಟ್ಟೆ ವ್ಯಾಪಾರವಾದಂತೆ ಮಾರಾಟವಾದರು ಎಂದು ಆರೋಪಿಸಿದರು. ಬಿಜೆಪಿ ಪಕ್ಷಕ್ಕೆ ಅಜೆಂಡಾ ಇಲ್ಲ. ಅದಕ್ಕೆ ಇರುವುದು ಕೇವಲ ಕೋಮುವಾದದ ಅಜೆಂಡಾ ಮಾತ್ರ. ಇದಕ್ಕೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಅಭಿವೃದ್ಧಿ, ರಸ್ತೆ, ಚರಂಡಿ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿರುವುದೇ ಸಾಕ್ಷಿ ಎಂದು ಆರೋಪಿದ್ದಾರೆ.
ಎಸ್‌ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಎಂ.ಕೆ. ಫೈಝಿ, ‘ಕಾಂಗ್ರೆಸ್ ಸ್ಪರ್ಧೆಯಿಂದ, ಜೆಡಿಎಸ್ ಸ್ಪರ್ಧೆಯಿಂದ ಬಿಜೆಪಿಗೆ ಗೆಲುವಾಗುತ್ತದೆ ಎಂದು ಯಾಕೆ ಹೇಳುವುದಿಲ್ಲ. ನಾವು ನಮ್ಮದೇ ಆದಂತಹ ರಾಜಕೀಯ ಮಾಡುತ್ತೇವೆ’ ಎಂದಿದ್ದಾರೆ. ಜೊತೆಗೆ ಬಿಜೆಪಿಯೇತರ ಯಾವುದೇ ಪಕ್ಷದೊಂದಿಗೆ ಎಸ್‌ಡಿಪಿಐ ಪಕ್ಷ ಮೈತ್ರಿಗೆ ಸಿದ್ಧ ಎಂದು ಘೋಷಿಸಿದ್ದಾರೆ.
ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಇಂತಿವೆ ; ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ಕೆ.ಎಚ್.ಅಬ್ದುಲ್ ಮಜೀದ್, ಬೆಂಗಳೂರಿನ ಪುಲಕೇಶಿನಗರಕ್ಕೆ (ಎಸ್‌ಸಿ) ಬಿ.ಆರ್.ಭಾಸ್ಕರ ಪ್ರಸಾದ್, ಬೆಂಗಳೂರಿನ ಸರ್ವಜ್ಞನಗರಕ್ಕೆ ಅಬ್ದುಲ್ ಹನ್ನಾನ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಇಲ್ಯಾಸ್ ಮಹಮ್ಮದ್ ತುಂಬೆ, ಮೂಡಬಿದಿರೆ ಕ್ಷೇತ್ರಕ್ಕೆ ಅಲ್ಫೋನ್ಸೋ ಫ್ರಾಂಕೋ, ದಕ್ಷಿಣ ಕನ್ನಡದ ಬೆಳ್ತಂಗಡಿ ಕ್ಷೇತ್ರಕ್ಕೆ ಅಕ್ಬರ್ ಬೆಳ್ತಂಗಡಿ, ಉಡುಪಿಯ ಕಾಪುಗೆ ಹನೀಫ್ ಮುಳೂರು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಇಸ್ಮಾಯಿಲ್ ಝಬೀವುಲ್ಲಾ, ಚಿತ್ರದುರ್ಗಕ್ಕೆ ಬಾಳೆಕಾಯಿ ಶ್ರೀನಿವಾಸ್, ವಿಜಯನಗರ ಕ್ಷೇತ್ರಕ್ಕೆ ನಜೀರ್ ಖಾನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಅಭ್ಯರ್ಥಿ ಅಂತಿಮವಾಗದ 44 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದ್ದು ಶೀಘ್ರವೇ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ಬಾರಿ ಎಸ್‍ಡಿಪಿಐ ಪಕ್ಷ ಜಾತ್ಯತೀತ ಪಕ್ಷಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು. ಅಧಿಕಾರಕ್ಕೆ ಬಂದ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಪಕ್ಷದ 14 ಶಾಸಕರು ಮತ್ತು ಮೂವರು ಜೆಡಿಎಸ್ ಶಾಸಕರು ಹೇಗೆ ಮಾರಾಟವಾದರು ಅವರು ಆರೋಪಿಸಿದ್ದಾರೆ.
ಭ್ರಷ್ಟಾಚಾರರಹಿತ ಶುದ್ಧ ಆಡಳಿತ ನಮ್ಮ ಪಕ್ಷದ ಗುರಿಯಾಗಿದ್ದು, ಪಕ್ಷದ ವತಿಯಿಂದ ಇಲ್ಲಿಯವರೆಗೆ 300 ಜನ ಸ್ಥಳೀಯ ಸಂಸ್ಥೆಗಳ ಮೂಲಕ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಕೂಡ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ಶಾಸಕರಾಗಿ ಆಯ್ಕೆಯಾಗುವ ನಮ್ಮ ಪಕ್ಷದ ಅಭ್ಯರ್ಥಿಗಳು ಸಹ ಭ್ರಷ್ಟಾಚಾರರಹಿತ ಆಡಳಿತವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಅರ್ಜಿಗೆ ಶುಲ್ಕವಿಲ್ಲ. ಅಭ್ಯರ್ಥಿಗಳು ಯಾರೂ ಕೂಡ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲ. ಬದಲಾಗಿ ಸಮಾಜದಲ್ಲಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರನ್ನು ಪಕ್ಷವೇ ಗುರುತಿಸಿ ಟಿಕೆಟ್ ನೀಡುವ ಪರಿಪಾಠವನ್ನು ನಾವು ಇಟ್ಟುಕೊಂಡಿದ್ದೇವೆ. ಅಭ್ಯರ್ಥಿ ತನ್ನ ಖರ್ಚಿನಲ್ಲಿ ಚುನಾವಣೆಗೆ ಹೋಗುವುದಿಲ್ಲ. ಬದಲಾಗಿ ಪಕ್ಷ ಚುನಾವಣೆಯನ್ನು ಎದುರಿಸುತ್ತದೆ ಎಂದು ಅಬ್ದುಲ್ ಮಜೀದ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post