ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿಯನ್ನು ಹೊಂದಿದ್ದ ಆರೋಪದ ಮೇರೆಗೆ ಮಂಗಳೂರು ವ್ಯಾಪ್ತಿಯ ಪ್ರಾದೇಶಿಕ ಉಪ ಔಷಧ ನಿಯಂತ್ರಕರ ಕಚೇರಿಯ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಎಂಬವರ ಮನೆಗೆ ಮಂಗಳೂರು ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿ ನಗದು ಮತ್ತು ಚಿರಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಬಾಬು ತನ್ನ ಸೇವಾವಧಿಯಲ್ಲಿ ನ್ಯಾಯಬದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿರುವ ಬಗ್ಗೆ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಕೆ.ಎನ್. ನೀಡಿದ ವರದಿಯ ಆಧಾರದ ಮೇಲೆ ಸೋಮವಾರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಅದರಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್‌ರ ಮಾರ್ಗದರ್ಶನದಲ್ಲಿ 6 ಮಂದಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡವು ಮಂಗಳವಾರ ಬಾಬು ಬಿ.ಎನ್.ಗೆ ಸೇರಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಟೌನ್‌ನಲ್ಲಿರುವ ವಾಸದ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು, ಬೆಂಗಳೂರಿನಲ್ಲಿರುವ ಫ್ಲಾಟ್ ಮತ್ತು ವಾಸದ ಮನೆಗಳು, ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆ ಹಾಗೂ ಕರ್ತವ್ಯ ನಿರ್ವಹಿಸುವ ಕಚೇರಿಯ ಮೇಲೆ ದಾಳಿ ನಡೆಸಿತು.


ಈ ವೇಳೆ ಬಾಬುಗೆ ಸಂಬಂಧಿಸಿದ 3,37,04,000 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳಲ್ಲದೆ ಬೆಂಗಳೂರಿನ ವಾಸದ ಮನೆಯಲ್ಲಿ 23,64,000 ರೂ. ನಗದು ಹಾಗೂ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ದೊರೆತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ಮತ್ತು ಸುರೇಶ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ, ಭಾರತಿ ಜಿ., ಶಿವರಾಜ್ ಕುಮಾರ್, ರಾಜೇಂದ್ರ ನಾಯ್ಕ್ ಹಾಗೂ ದ.ಕ., ಉಡುಪಿ, ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಘಟಕಗಳ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post