ಸುರತ್ಕಲ್: ನಿಲ್ಲಿಸಿದ ಕಾರಿನ ಮೇಲೆ ಸರಕು ಸಾಗಾಣಿಕೆಯ ಲಾರಿಯೊಂದು ಮಗುಚಿ ಬಿದ್ದು ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಹೊನ್ನಕಟ್ಟೆ ಸಿಗ್ನಲ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಕುಲಾಯಿ ಗೋಕುಲನಗರ ನಿವಾಸಿ ಲೋಕನಾಥ ಎಂದು ಗುರುತಿಸಲಾಗಿದೆ. ಸುಮಾರು ಅರ್ಧ ಗಂಟೆಯ ಹರ ಸಾಹಸ ಪಟ್ಟು ನಡೆಸಿದ ರಕ್ಷಣಾ ಕಾರ್ಯಾಚರಣೆ ಬಳಿಕ ಕಾರಿನ ಒಳಗಡೆ ಸಿಲುಕಿಕೊಂಡಿದ್ದ ಚಾಲಕನನ್ನು ಹೊರ ತೆಗೆಯಲಾಯಿತಾದರೂ ಆಗ ಬಹಳಷ್ಟು ತಡವಾಗಿತ್ತು. ಲಾರಿ ಮಗುಚಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಫತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ. ಕ್ರೇನ್ ಬಳಸಿ ಲಾರಿಯನ್ನು ಕಾರಿನ ಮೇಲಿನಿಂದ ತೆಗೆಯಲಾಯಿತು. ಲೋಕನಾಥ ಅವರು ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆಯ ಪಕ್ಕದಲ್ಲಿ ರಸ್ತೆ ದಾಟುವ ಸಲುವಾಗಿ ಕಾರು ನಿಲ್ಲಿಸಿದ್ದರು ಎನ್ನಲಾಗಿದೆ ಆದರೇ ಇನ್ನೇನೋ ಕಾರಿನಿಂದ ಇಳಿಯಬೇಕು ಅನ್ನುವಷ್ಟರಲ್ಲಿ ಜವರಾಯ ಲಾರಿ ರೂಪದಲ್ಲಿ ಬಂದಿದ್ದ. ಕಾರಿನ ಹಿಂಬದಿಯಿಂದ ಭಾರೀ ಗಾತ್ರದ ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಮಗುಚಿ ಬಿದ್ದಿದೆ.



ಚಾಲಕ ಹಠಾತ್ ಬ್ರೆಕ್ ಹಾಕಿ ಲಾರಿಯನ್ನು ತಿರುಗಿಸಿದ ಪರಿಣಾಮ ಈ ಅವಘಢ ಸಂಭವಿಸಿದೆ ಎನ್ನಲಾಗಿದೆ. ಲಾರಿ ಎಡ ಬದಿಗೆ ವಾಲಿ ಕಾರಿನ ಮೇಲೆ ಬಿದ್ದಿದೆ. ಲಾರಿಯಡಿಗೆ ಸಿಲುಕಿದ ಕಾರು ಅಪ್ಪಚ್ಚಿಯಾಗಿದೆ. ಲಾರಿ ಮಂಗಳೂರಿನಿಂದ ಉಡುಪಿಯತ್ತ ಸಾಗುತಿತ್ತು. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಕಾರಿನ ಮುಂಭಾಗದಲ್ಲಿ ಇದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು ದ್ವಿಚಕ್ರ ವಾಹನ ಸವಾರ ತನ್ನ ಸ್ಕೂಟರ್ ಬಿಟ್ಟು ಓಡಿದ ಪರಿಣಾಮ ಮತ್ತೊಂದು ಜೀವ ಬಲಿಯಾಗುವುದು ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post