ಮಂಗಳೂರು, ಆ.07: ಜೋಕಟ್ಟೆಯಲ್ಲಿ ಬೆಳಗಾವಿಯ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಹಂಚಿನಾಳ ಗ್ರಾಮದ ಫಕೀರಪ್ಪ ಹಣಮಪ್ಪ ಮಾದರ (51) ವರ್ಷದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಈತ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮಂಗಳವಾರ ಬೆಳಗ್ಗೆ 14 ವರ್ಷದ ಬಾಲಕಿ ಒಬ್ಬಂಟಿ ಇರುವುದನ್ನು ತಿಳಿದು ಆಕೆಯನ್ನು ಬಲವಂತದಿಂದ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಾಲಕಿ ಕೊಣಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕೈ ನೋವೆಂದು ಚಿಕಿತ್ಸೆಗಾಗಿ ಜೋಕಟ್ಟೆಯಲ್ಲಿರುವ ತನ್ನ ಚಿಕ್ಕಪ್ಪ ಹನುಮಂತು ಅವರ ಮನೆಗೆ ಬಂದು ಉಳಿದುಕೊಂಡಿದ್ದಳು. ನಿನ್ನೆ ಬೆಳಗ್ಗೆ ಚಿಕ್ಕಪ್ಪ ಹನುಮಂತು ಮತ್ತು ಮನೆಯಲ್ಲಿದ್ದ ಇತರರು ಕೆಲಸಕ್ಕೆ ಹೋಗಿದ್ದರು. ಹುಡುಗಿ ಒಬ್ಬಂಟಿಯಾಗೇ ಇದ್ದಳು. ಇದೇ ವೇಳೆ, ಬೆಳಗಾವಿಯಲ್ಲಿರುವ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಫೋನ್ ಮಾಡಿ ಮಗಳಿಗೆ ಕೊಡುವಂತೆ ಹೇಳಿದ್ದರು. ಪಕ್ಕದ ಮನೆಯವರು ಬಂದು ನೋಡಿದಾಗ ಬಾಲಕಿಯನ್ನು ಕುತ್ತಿಗೆ ಬಿಗಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಾಲಕಿ ಕುಟುಂಬಸ್ಥರು ಬೆಳಗಾವಿ ಮೂಲದವಳೇ ಆಗಿದ್ದಾಳೆ.
ಪಣಂಬೂರು ಪೊಲೀಸರು ಮೇಲ್ನೋಟಕ್ಕೆ ಕೊಲೆಗೈದಿರುವುದನ್ನು ತಿಳಿದು ಕೊಲೆ ಪ್ರಕರಣ ದಾಖಲಿಸಿದ್ದರು. ಆಸುಪಾಸಿನವರನ್ನು ವಿಚಾರಣೆ ನಡೆಸಿದಾಗ, ಕೊಲೆ ಸುಳಿವು ಸಿಕ್ಕಿತ್ತು. ವಿಚಾರಣೆ ನಡೆಸಿದಾಗ ಆರೋಪಿ ಫಕೀರಪ್ಪ ಕೃತ್ಯ ಎಸಗಿರುವುದು ಕಂಡುಬಂದಿದೆ. ಫಕೀರಪ್ಪ ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ಕೂಲಿ ಕಾರ್ಮಿಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಎಸಿಪಿಗಳಾದ ರವೀಶ್ ನಾಯಕ್, ಮನೋಜ್ ಕುಮಾರ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಇನ್‌ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್, ಎಸ್‌ಐ ಶ್ರೀಕಲಾ, ಎಎಸ್‌ಐ ಕೃಷ್ಣ, ಎಚ್‌ಸಿ ಸತೀಶ್ ಎಂ.ಆರ್., ಸಯ್ಯದ್ ಇಂತಿಯಾಜ್, ಸಿಪಿಸಿ ಶಶಿಕುಮಾರ್, ರಾಕೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Discussion about this post