ಉಡುಪಿ , ಆ. 8: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣಕಾಸಿನ ವಿಚಾರವಾಗಿ ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಲು ಉತ್ತರ ಭಾರತದ ಸುಪಾರಿ ಕಿಲ್ಲರ್‌ಗಳಿಗೆ ಗುತ್ತಿಗೆ ನೀಡಲಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಡೇವಿಡ್ ಡಿಸೋಜಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಡುಪಿ ಪೊಲೀಸರು, ಕೆಲವೇ ಗಂಟೆಗಳಲ್ಲಿ ಹತ್ಯೆಯ ಹಿಂದೆ ಇರುವ ಜಾಲದ ಸುಳಿವು ಪತ್ತೆಹಚ್ಚಿದ್ದಾರೆ.

ಶಾರ್ಪ್ ಶೂಟರ್‌ಗಳು! ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಲು ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರ ಮೂಲದ ಶಾರ್ಪ್ ಶೂಟರ್‌ಗಳಿಗೆ ಸುಪಾರಿ ನೀಡಲಾಗಿತ್ತು ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಸುಪಾರಿ ಪಡೆದ ಮೂವರ ತಂಡ ಮುದರಂಗಡಿಗೆ ಆಗಮಿಸಿ, ಡೇವಿಡ್ ಡಿಸೋಜಾ ಅವರ ಕಚೇರಿ ಬಳಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ ಎನ್ನಲಾಗಿದೆ.
ಹತ್ಯೆ ನಡೆದ ಬೆನ್ನಲ್ಲೇ ಉಡುಪಿ ಪೊಲೀಸರು ಆರೋಪಿಗಳಿಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಶಿರೂರು ಸಮೀಪ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವನನ್ನು ರಾಜು ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳು ಹಲವು ರೀತಿಯ ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎನ್ನಲಾಗಿದ್ದು, ಅವರ ಸಂಪೂರ್ಣ ಗುರುತು ಹಾಗೂ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.


ಸುಪಾರಿ ಕೊಟ್ಟವರು ಯಾರು? ; ಡೇವಿಡ್ ಡಿಸೋಜಾ ಹತ್ಯೆಯ ಹಿಂದೆ ಹಣಕಾಸಿನ ವ್ಯವಹಾರವೇ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಸುಪಾರಿ ನೀಡಿದ ಪ್ರಮುಖ ಆರೋಪಿಗಳು ಯಾರು? ಹತ್ಯೆಗೆ ಎಷ್ಟು ಹಣದ ಡೀಲ್ ನಡೆದಿತ್ತು? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಾಡಹಗಲೇ ನಡೆದಿದ್ದ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಉತ್ತರ ಭಾರತದ ಸುಪಾರಿ ಕಿಲ್ಲರ್‌ಗಳ ಬಂಧನವಾಗಿರುವುದು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಇದೀಗ ಸುಪಾರಿ ನೀಡಿದ ಮಾಸ್ಟರ್‌ಮೈಂಡ್‌ಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸರ್ವೀಸ್ ಪಿಸ್ತೂಲ್‌ನಿಂದ ಫೈರ್ ;ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಬೈಂದೂರಿನ ಒತ್ತಿನಾಣೆ ಬಳಿ ಬಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದರು. ಆರೋಪಿಗಳನ್ನು ಬೆನ್ನಟ್ಟಿದ ವೇಳೆ ಉತ್ತರ ಪ್ರದೇಶದ ಥಾಣಾ ಪಿಲ್ವ ನಿವಾಸಿ ರಾಜು (42) ಎಂಬಾತ ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ, ಪಿಸ್ತೂಲ್‌ನಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲ್‌ನ್ನೂ ವಶಪಡಿಸಿಕೊಳ್ಳಲಾಗಿದೆ. ಗುಂಡಿನ ದಾಳಿಯಲ್ಲಿ ಪಿಎಸ್‌ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕಾಸಿನ ವೈಮನಸ್ಸು: ಡೇವಿಡ್ ಡಿಸೋಜಾ ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದರೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೃತ್ಯಕ್ಕೆ ಸಹಕರಿಸಿದವರು, ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಎರ್ಮಾಳ್‌ನಲ್ಲಿ ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ ಜಿ., ಡಿಎಸ್‌ಬಿ ವಿಭಾಗದ ಪಿಐ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ವಿವಿಧ ಠಾಣೆಗಳ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾ ತಂಡ, ಬೆರಳಚ್ಚು, ಶ್ವಾನದಳ ಹಾಗೂ ಸಿಡಿಆರ್ ಸೆಲ್ ತಂಡಗಳೂ ಕಾರ್ಯಾಚರಣೆಗೆ ಸಹಕರಿಸಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post