ಹೆಬ್ರಿ: ಹೆಬ್ರಿಯಿಂದ ಬ್ರಹ್ಮಾವರ ಮಾರ್ಗವಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹುತ್ತುರ್ಕೆ ಬಳಿ ಆ.7ರ ಶುಕ್ರವಾರ ಸಂಜೆ 5.30ರ ಸುಮಾರಿಗೆ ಸಂಭವಿಸಿದೆ ಎನ್ನಲಾಗಿದೆ. ಹೆಬ್ರಿ ಸಂತೆಕಟ್ಟೆ ನಿವಾಸಿ ಸದಾನಂದ ನಾಯಕ್ ಮೃತರು.
ಹೆಬ್ರಿಯಿಂದ ಬ್ರಹ್ಮಾವರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಹುರ್ತುಕೆ ಎಂಬಲ್ಲಿ ಸದಾನಂದ ನಾಯಕ್ ಅವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಹಠಾತ್ತಾಗಿ ವಿದ್ಯುತ್ ಕಂಬ ಹಾಗೂ ತಂತಿಗಳೂ ಮರದೊಂದಿಗೆ ಕಾರಿನ ಮೇಲೆ ಬಿದ್ದಿವೆ. ಈ ಪರಿಣಾಮ ಕಾರು ಮರ, ವಿದ್ಯುತ್ ಕಂಬ ಹಾಗೂ ತಂತಿಗಳ ನಡುವೆ ಸಿಲುಕಿಕೊಂಡಿದೆ. ಚಾಲಕ ಸದಾನಂದ ನಾಯಕ್ ತೀವ್ರ ಗಾಯಗೊಂಡು ಅದರೆಡೆಯಲ್ಲಿ ಸಿಲುಕಿ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿದ್ದ ಕಾರಿನ ಮೇಲೆ ಬಿದ್ದಿದ್ದ ದೈತ್ಯ ಮರವನ್ನು ತೆರವುಗೊಳಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕ್ರೇನ್ ಬಳಸಿ ಹರಸಾಹಸ ಪಟ್ಟರು. ಸುದೀರ್ಘ ಕಾರ್ಯಾಚರಣೆ ಬಳಿಕ ಮೃತದೇಹವನ್ನು ಹೊರ ತೆಗೆಯಲಾಯಿತು. ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post