ಮಂಗಳೂರು: ಮೂಡಿಗೆರೆ ತಾಲ್ಲೂಕಿನ ಹೊರನಾಡು ಚಿಕ್ಕಕೂಡಿಗೆ ಗ್ರಾಮದ ಕೃಷಿ ಕೂಲಿ ಕಾರ್ಮಿಕ ಶ್ರೀನಿವಾಸ ಗೌಡ್ಲು ಅವರು ಮರದ ರೆಂಬೆ ಕಡಿಯಲು ಹೋಗಿ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದು, ಮೂರು ವಾರಗಳಿಂದ ಇಲ್ಲಿನ ವೆನ್ಲಾಕ್ ಆಸ್ಪತ್ರೆ ಹಾಸಿಗೆಯಲ್ಲಿ ಮಲಗಿ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಅವರ ಕುಟುಂಬವು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದೆಯಾದರೂ ಆಧಾರ್ ಜೋಡಣೆಗೆ ಸಂಬಂಧಿಸಿದ ತಾಂತ್ರಿಕ ಅಡಚಣೆಯಿಂದಾಗಿ ಶ್ರೀನಿವಾಸ ಅವರ ಹೆಸರು ಕೈತಪ್ಪಿತ್ತು. ಬಿಪಿಎಲ್ ಕಾರ್ಡ್‌ನಲ್ಲಿ ಹೆಸರಿಲ್ಲದ ಕಾರಣಕ್ಕೆ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಉಚಿತ ಶಸ್ತ್ರಚಿಕಿತ್ಸೆಗೆ ನಿರಾಕರಿಸಿದ್ದರು. ಮುರಿದ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ₹ 72 ಸಾವಿರ ವೆಚ್ಚವಾಗುತ್ತದೆ. ಆದರೆ, ಎಪಿಎಲ್ ಕಾರ್ಡ್ ಆಧಾರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಒಟ್ಟು ಮೊತ್ತದ ಶೇ 70ರಷ್ಟು ವೆಚ್ಚ ಭರಿಸಬೇಕು ಎಂದು ಆಸ್ಪತ್ರೆ ವೈದ್ಯರು ಸೂಚಿಸಿದ್ದರು. ಅಷ್ಟು ಹಣ ಇಲ್ಲದೇ ಕುಟುಂಬ ಕಂಗಾಲಾಗಿತ್ತು. ಡಿವೈಎಫ್‌ಐ ಸಂಘಟನೆಯವರು ಒತ್ತಾಯಿಸಿದರೂ ಆಸ್ಪತ್ರೆಯವರು ಉಚಿತ ಶಸ್ತ್ರಚಿಕಿತ್ಸೆ ನಡೆಸಲು ನಿರಾಕರಿಸಿದ್ದರು.
ತಾಂತ್ರಿಕ ದೋಷ ಸರಿಪಡಿಸಿ ಕುಟುಂಬದವರು ಬಿಪಿಎಲ್ ಕಾರ್ಡ್ ಅನ್ನು ಸೋಮವಾರ ಆಸ್ಪತ್ರೆಗೆ ನೀಡಿದ್ದರು. ‘ಈಗಾಗಲೇ ಆಯುಷ್ಮಾನ್ ಪೋರ್ಟಲ್‌ನಲ್ಲಿ ರೋಗಿಯ ವಿವರ ಅಪ್‌ಲೊಡ್ ಮಾಡಿರುವುದರಿಂದ ಅದನ್ನು ಬಿಪಿಎಲ್‌ಗೆ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಕೈಚೆಲ್ಲಿದ್ದರು’ ಎಂದು ಶ್ರೀನಿವಾಸ ಗೌಡ್ಲು ಕುಟುಂಬದವರು ತಿಳಿಸಿದರು. ‘ಶ್ರೀನಿವಾಸ್ ಅವರೇ ಕುಟುಂಬಕ್ಕೆ ಆಧಾರವಾಗಿದ್ದರು. ಅವರೇ ಈಗ ಸ್ನಾನ, ಶೌಚ ಸಹಿತ ನಿತ್ಯ ವಿಧಿಗಳನ್ನು ಹಾಸಿಗೆಯಲ್ಲೆ ಮುಗಿಸಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ. ಅವರ ತಂದೆ ಮಂಜಪ್ಪ ಗೌಡ ಅವರಿಗೆ ವಯಸ್ಸಾಗಿದೆ. ಅಣ್ಣ ಅನಂತ ಅವರೂ ಅಂಗವಿಕಲ. ತಾಯಿ ಯಶೋದಾ ಅವರೂ ಮಾನಸಿಕ ಸಮಸ್ಯೆಯನ್ನು ಹೊಂದಿದ್ದಾರೆ. ಹಾಗಾಗಿ ನೆರೆಕರೆಯವರು ಹಾಗೂ ಬಂಧುಗಳು ದೂರದ ಮಂಗಳೂರಿಗೆ ಬಂದು ಗಾಯಾಳುವನ್ನು ನೊಡಿಕೊಳ್ಳಬೇಕಾದ ಸ್ಥಿತಿ ಇದೆ’ ಎಂದು ಶ್ರೀನಿವಾಸ ಗೌಡ್ಲು ಅವರ ಭಾವ ಮಣಿಶೇಖರ್ ತಿಳಿಸಿದರು. ‘ಶ್ರೀನಿವಾಸ್ ಅವರು ವೆನ್ಲಾಕ್‌ನಲ್ಲಿ ಮಲಗಿ ಮೂರು ವಾರ ಕಳೆದರೂ ಅವರ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿಲ್ಲ. ಆರೋಗ್ಯದ ವ್ಯಾಪಾರೀಕರಣದಿಂದಾಗಿ ಎಲ್ಲಾ ಬಡವರು ಇಂತಹ ದುಃಸ್ಥಿತಿ ಎದುರಿಸಬೇಕಾಗುತ್ತಿದೆ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ದೂರಿದರು. ಶಸ್ತ್ರಚಿಕಿತ್ಸೆ ಬಗ್ಗೆ ಪ್ರತಿಕ್ರಿಯಿಸಿದ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಸದಾಶಿವ ಶ್ಯಾನುಭಾಗ್, ‘ಶ್ರೀನಿವಾಸ ಕುಟುಂಬದವರು ಮಂಗಳವಾರವಷ್ಟೇ ಬಿಪಿಎಲ್ ಪಡಿತರ ಚೀಟಿ ಹಾಜರುಪಡಿಸಿದ್ದಾರೆ. ಹಾಗಾಗಿ ಅವರಿಗೆ ಶನಿವಾರ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತೇವೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post