ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸೆ.9ರಂದು ನಡೆಯಲಿದ್ದು, ಬಿಜೆಪಿ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. 23ನೇ ಅವಧಿಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿ ನಿಗದಿಯಾಗಿರುವುದರಿಂದ ಹಲವರು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಮತ್ತು ಎಸ್‌ಡಿಪಿಐ ಇಬ್ಬರು ಸದಸ್ಯರ ಬಲ ಹೊಂದಿವೆ. ಹಾಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅವಧಿ ಮಾರ್ಚ್ 2ಕ್ಕೆ ಕೊನೆಗೊಂಡಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶವೊಂದರ ಗೊಂದಲದಿಂದ, ಪ್ರೇಮಾನಂದ ಶೆಟ್ಟಿ ಅವರಿಗೆ ಹೆಚ್ಚುವರಿಯಾಗಿ ಆರು ತಿಂಗಳು ಅಧಿಕಾರದಲ್ಲಿರಲು ಸಾಧ್ಯವಾಯಿತು.
ಸೆ.9ರಂದು ನಡೆಯಲಿರುವ ಮೇಯರ್ ಚುನಾವಣೆಗೆ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್ ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಉತ್ತರ ಕ್ಷೇತ್ರದಿಂದ ಪದವು ವಾರ್ಡ್‌ನ ಜಯಾನಂದ ಹಾಗೂ ಕುಂಜತ್ತಬೈಲ್ ವಾರ್ಡ್‌ನ ಶರತ್ ಅವರ ಹೆಸರು ವಿಶೇಷವಾಗಿ ಕೇಳಿ ಬರುತ್ತಿವೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ವೇಳೆ ಸಕ್ರಿಯವಾಗಿ ಕೆಲಸ ಮಾಡಿದ, ಶಾಸಕ ಡಾ. ಭರತ್ ಶೆಟ್ಟಿ ಅವರ ಸಹಾಯಕರಾಗಿ ಕೆಲಸ ಮಾಡಿದ್ದ ಬಂಗ್ರಕುಳೂರು ವಾರ್ಡ್‌ನ ಕಿರಣ್ ಕೋಡಿಕಲ್ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಮೂರನೇ ಬಾರಿ ಸದಸ್ಯರಾಗಿರುವ ದಕ್ಷಿಣ ಕ್ಷೇತ್ರದ ಕೊಡಿಯಾಲ್‌ಬೈಲ್ ವಾರ್ಡ್‌ನ ಸುಧೀರ್ ಶೆಟ್ಟಿ ಕಣ್ಣೂರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ, ಇವರು ಸಂಸದರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ‘ಜಾತಿ ಲೆಕ್ಕಾಚಾರ ಪರಿಗಣಿಸಿದಾಗ ಹಾಲಿ ಇರುವ ಮೇಯರ್ ಬಂಟ ಸಮುದಾಯದವರಾಗಿದ್ದು, ಇನ್ನೊಂದು ಪ್ರಬಲ ಬಿಲ್ಲವ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವ ಚರ್ಚೆ ಶುರುವಾಗಿದೆ. ಚುನಾವಣೆ ವರ್ಷ ಆಗಿರುವುದರಿಂದ ಸಮರ್ಥ ಅಭ್ಯರ್ಥಿ ಆಯ್ಕೆ, ಎಲ್ಲರಿಗೂ ಒಪ್ಪಿತವಾಗುವ ಮೇಯರ್ ಅಭ್ಯರ್ಥಿ ಆಯ್ಕೆ ಸವಾಲಾಗಿದೆ’ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಉಪ ಮೇಯರ್ ಸ್ಥಾನವು ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದ್ದು, ಪೂರ್ಣಿಮಾ, ಶಕೀಲ ಕಾವ, ವೀಣಾ ಮಹಾಬಲ, ಜಯಶ್ರೀ ಕುಡ್ವ, ಹೇಮಲತಾ, ಶ್ವೇತಾ, ಲಕ್ಷ್ಮಿ ಅವರ ಹೆಸರು ಚಾಲ್ತಿಯಲ್ಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post