ಮಂಗಳೂರು: ಜೋಕಟ್ಟೆ ಪರಿಸರದಲ್ಲಿ ಕೈಗಾರಿಕೆಗಳಿಂದ ಹೆಚ್ಚುತ್ತಿರುವ ಮಾಲಿನ್ಯದಿಂದ್ದ ರೋಸಿ ಹೋದ ಗ್ರಾಮಸ್ಥರು, ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಣಕು ಶವಯಾತ್ರೆ ನಡೆಸಿ, ಅದರ ಪ್ರತಿಕೃತಿ ದಹಿಸುವ ಮೂಲಕ ಬುಧವಾರ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ವಾರದ ಹಿಂದಷ್ಟೇ ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆ ಬಳಿಕವೂ ಮಂಡಳಿಯು ಮಾಲಿನ್ಯಕ್ಕೆ ಕಾರಣವಾದ ಕೈಗಾರಿಕೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬೈಕಂಪಾಡಿ ಜಂಕ್ಷನ್‌ನಿಂದ ಮಂಡಳಿಯ ಕಚೇರಿವರೆಗೆ ನಡೆದ ಅಣಕು ಶವಯಾತ್ರೆಯಲ್ಲಿ ಭಾಗವಹಿಸಿದ ಸ್ಥಳೀಯರು ಮಂಡಳಿ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ‘ವಿಲ್ಮಾ, ರುಚಿಗೋಲ್ಡ್, ಯು.ಬಿ. ಬಿಯರ್ ಉತ್ಪಾದನಾ ಘಟಕ ಸೇರಿದಂತೆ ವಿವಿಧ ಕೈಗಾರಿಕೆಗಳ ತ್ಯಾಜ್ಯದಿಂದ ಫಲ್ಗುಣಿ ನದಿಯಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಜೋಕಟ್ಟೆ, ಬಜ್ಪೆ, ಬೈಕಂಪಾಡಿ, ಸುರತ್ಕಲ್ ಮುಂತಾದ ಕೈಗಾರಿಕಾ ಬಾಹುಳ್ಯದ ಪ್ರದೇಶಗಳು ಗಂಭೀರ ಪ್ರಮಾಣದಲ್ಲಿ ಮಾಲಿನ್ಯಗೊಂಡಿವೆ. ಇದನ್ನು ತಡೆಯಬೇಕಾದ ಕೆಎಸ್‌ಪಿಸಿಬಿ ಅಧಿಕಾರಿಗಳು ಕೈಗಾರಿಕೆಗಳ ಅಡಿಯಾಳಾಗಿ ಅಕ್ರಮಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆಗಳ ಅಕ್ರಮಗಳ ಕುರಿತು ಮೌನ ವಹಿಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‘27 ಎಕರೆ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸುವಂತೆ ಸರ್ಕಾರ ಎಂಆರ್‌ಪಿಎಲ್‌ಗೆ ಆದೇಶ ಮಾಡಿದ್ದರೂ ಅದನ್ನು ಜಾರಿಗೊಳಿಸಲು ಸಂಸ್ಥೆ ಹಿಂದೇಟು ಹಾಕುತ್ತಿದೆ. ಹಸಿರು ವಲಯ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಸಹಕರಿಸುತ್ತಿಲ್ಲ. ಶೇ 33ರಷ್ಟು ಜಮೀನಿನಲ್ಲಿ ಹಸಿರು ವಲಯ ನಿರ್ಮಿಸದ ಕಂಪನಿಯ ಬಾಗಿಲು ಮುಚ್ಚಿಸುವ ಅವಕಾಶ ಕೆಎಸ್‌ಪಿಸಿಬಿಗೆ ಇದೆ. ಆದರೆ, ಮಂಡಳಿಯ ಅಧಿಕಾರಿಗಳು ಎಂಆರ್‌ಪಿಎಲ್‌ಗೆ ವಿಧೇಯರಾಗಿ ವರ್ತಿಸುತ್ತಿದ್ದಾರೆ. ಎರಡು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಥಳೀಯರ ಸಂಕಟಗಳಿಗೆ ಕಿವಿಗೊಡದಿರುವುದು ಬೇಸರದ ವಿಷಯ. ಇನ್ನು ಸಹನೆಗೆ ಅರ್ಥವಿಲ್ಲ. ಮಂಡಳಿಯ ಹೊಣೆಗೇಡಿತನದ ವಿರುದ್ದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ’ ಎಂದರು.
ಹೋರಾಟ ಸಮಿತಿ ಸಹ ಸಂಚಾಲಕ ಅಬೂಬಕ್ಕರ್ ಬಾವ, ಗ್ರಾಮ ಪಂಚಾಯಿತಿ ಸದಸ್ಯೆ ಜುಬೇದಾ, ಸ್ಥಳೀಯ ಮುಖಂಡರಾದ ಎಸ್. ಬಶೀರ್, ಮನೋಜ್ ಜೋಕಟ್ಟೆ, ಶ್ರೀನಿವಾಸ್, ಸುರೇಂದ್ರ ಜೋಕಟ್ಟೆ, ಶೇಖರ್ ನಿರ್ಮುಂಜೆ, ಇಕ್ಬಾಲ್ ಜೋಕಟ್ಟೆ, ಚಂದ್ರಶೇಖರ್, ಸಿಲ್ವಿಯಾ, ಯಮುನಾ ಕೆಂಜಾರು, ಹನೀಫ್ ಜೋಕಟ್ಟೆ, ರಾಜು ಜೋಕಟ್ಟೆ, ಲಾನ್ಸಿ ಜೋಕಟ್ಟೆ, ದೊಂಬಯ್ಯ ನೇತೃತ್ವ ವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post