ಬಂಟ್ವಾಳ : ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫಿಸ್ಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ವಿರುದ್ಧ ಲಂಚ ಸ್ವೀಕಾರದ ಆರೋಪ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗವು ಕೈಗೊಂಡ ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿದೆ.
ಪ್ರಕರಣದ ಹಿನ್ನೆಲೆ : ದೂರುದಾರನ ಮಾವನಿಗೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ 1 ಎಕರೆ ಕೃಷಿ ಜಮೀನು ಇದೆ. ಈ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ 2024ರಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕೊಳವೆ ಬಾವಿ ನಿರ್ಮಾಣಕ್ಕಾಗಿ ಪೆರುವಾಯಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಹೆಸರನ್ನು ಕೊಳವೆ ಬಾವಿ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ. 2025ರ ಮೇ ತಿಂಗಳಲ್ಲಿ ಪುನಃ ಅರ್ಜಿ ಸಲ್ಲಿಸಿದರೂ, ಗ್ರಾಮ ಪಂಚಾಯಿತಿಯಿಂದ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫಿಸ್ಸಾ ಅವರನ್ನು ಅರ್ಜಿದಾರರು ಸೆಪ್ಟಂಬರ್ 2ರಂದು ಭೇಟಿಯಾಗಿ ಕೊಳವೆ ಬಾವಿ ಮಂಜೂರಾತಿಯ ಬಗ್ಗೆ ವಿಚಾರಿಸಿದಾಗ, ‘ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡಬೇಕಾಗಿದೆ. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೆದುಕೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿರುತ್ತಾರೆ. ತನ್ನಲ್ಲಿ ಅಷ್ಟು ಹಣವಿಲ್ಲವೆಂದು ಹೇಳಿದ ಅರ್ಜಿದಾರರು ವಾಪಸ್ ಬಂದಿದ್ದಾರೆ.
ಬಳಿಕ ಸೆಪ್ಟಂಬರ್ 4ರಂದು ದೂರುದಾರರು ಗ್ರಾ.ಪಂ. ಅಧ್ಯಕ್ಷೆ ನೆಫಿಸಾ ಅವರಲ್ಲಿ ಬೋರ್‌ವೆಲ್ ಹಾಕಿಸಿ ಕೊಡುವಂತೆ ಕೇಳಿಕೊಂಡಾಗ ಅಧ್ಯಕ್ಷೆ ನೆಫಿಸಾ ಅವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ₹10,000(ಹತ್ತು ಸಾವಿರ) ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಪಿರ್ಯಾದಿದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನೆಫಿಸ್ಸಾ ಅವರು ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ಸೆಪ್ಟಂಬರ್ 6ರಂದು ಅರ್ಜಿದಾರರಿಂದ ₹10,000 ಲಂಚದ ಹಣವನ್ನು ಸ್ವೀಕರಿಸುವಂತೆ ಸೂಚಿಸಿದ್ದರು. ಈ ವೇಳೆ, ಲೋಕಾಯುಕ್ತ ಪೊಲೀಸರು ಯೋಜಿತ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡು, ಹಣ ಸ್ವೀಕರಿಸುವ ಸಂದರ್ಭದಲ್ಲಿ ನೆಫಿಸ್ಸಾ ಮತ್ತು ವಿಲಿಯಂ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ ಎನ್, ರವಿ ಪವಾರ್ ಮತ್ತು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post