ಉಡುಪಿ: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ ಏಳು ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಅವರಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಧನುಷ್ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಲೋಕೇಶ್, ಆಶೀಶ್, ಗೌತಮ್, ರಾಹುಲ್, ಕುಶಲ್, ಅನೀಶ್, ನಿರೂಪ್, ನಿತಿನ್ ಹಾಗೂ ಅಂಜನ್ ಅವರೊಂದಿಗೆ ಪ್ರವಾಸಿ ತಾಣಗಳ ವೀಕ್ಷಣೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಶುಕ್ರವಾರ ಉಡುಪಿಗೆ ಬಂದಿಳಿದಿದ್ದರು. ಅಲ್ಲೆಲ್ಲ ಸುತ್ತಾಡಿ, ರವಿವಾರ ಬೆಳಗ್ಗೆ ಗೂಗಲ್ ಮ್ಯಾಪ್ ಮೂಲಕ ಬೀಚ್ ಲೊಕೇಶನ್ ಹಾಕಿ, ಇವರಲ್ಲಿ ಐವರು ಗೋಪಾಡಿಯ ಚರ್ಕಿಕಡು ಬೀಚ್‌ಗೆ ಬಂದಿದ್ದರು. ಅಲ್ಲಿ ಬಲೆ ಬೀಸುತ್ತಿದ್ದ ಕೆಲವರು ನೀರಿಗೆ ಇಳಿಯದಂತೆ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿ ಇಳಿದಿದ್ದರು. ಸ್ವಲ್ಪ ಹೊತ್ತು ಈಜಾಡಿ, ಬಳಿಕ ತೆರಳಿದ್ದರು. ಆ ಬಳಿಕ ಮತ್ತೆ ಬೆಳಗ್ಗೆ 11.30ರ ಸುಮಾರಿಗೆ 10 ಮಂದಿ ಈಜಲು ಬೀಚ್‌ಗೆ ಬಂದಿದ್ದರು. ಆಗಲೂ ಇದು ಅಪಾಯಕಾರಿ ಸ್ಥಳ, ಆಳವಿದೆ. ಇಲ್ಲಿ ಇಳಿಯಬೇಡಿ ಎಂದು ಸ್ಥಳೀಯರು ಎಚ್ಚರಿಸಿದ್ದರು. ಆದರೂ ಇವರಲ್ಲಿ 9 ಮಂದಿ ಈಜಲು ಕಡಲಿಗಿಳಿದಿದ್ದರು. ಚರ್ಮದ ಅಲರ್ಜಿ ಇದ್ದುದರಿಂದ ಇವರಲ್ಲಿ ಒಬ್ಬನಾದ ಅಂಜನ್ ಬೀಚ್‌ಗೆ ಬಂದಿರಲಿಲ್ಲ.
ತುರ್ತು ಕರೆಗೆ ಈಶ್ವರ್ ಮಲ್ಪೆ ಸ್ಪಂದನೆ: ಘಟನೆಯ ಬಗ್ಗೆ ಸಮಾಜ ಸೇವಕ ಈಶ್ವರ್ ಮಲ್ಪೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ತತ್‌ಕ್ಷಣ ಸ್ಪಂದಿಸಿದ ಅವರು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ್ದರು. ನೀರುಪಾಲಾಗಿ ಸಾವನ್ನಪ್ಪಿದ ಲೋಕೇಶ್ ಹಾಗೂ ಗೌತಮ್ ಅವರ ಮೃತದೇಹಗಳನ್ನು ತತ್‌ಕ್ಷಣ ಮೇಲೆತ್ತುವಲ್ಲಿ ಸ್ಥಳೀಯರೊಂದಿಗೆ ನೆರವಾದರು. ಸಂಜೆಯ ವೇಳೆಗೆ ಸ್ಥಳೀಯ ಮೀನುಗಾರರಿಗೆ ಅನೀಶ್ ಅವರ ಮೃತದೇಹ ಕೂಡ ಸಿಕ್ಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post