ಬಂಟ್ವಾಳ : ಮಹಿಳೆಯೊಬ್ಬರಿಗೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮೂಲಕ ಬೆದರಿಸಿ, ಡಿಜಿಟಲ್ ಅರೆಸ್ಟ್ ಮಾಡಿ, ಸುಮಾರು 1.16 ಕೋಟಿ ರೂ. ಲಪಟಾಯಿಸಿರುವ ಬಗ್ಗೆ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.24ರಂದು ಬೆಳಗ್ಗೆ ಸುಮಾರು 11.44ರ ವೇಳೆ ಮಹಿಳೆ ಮನೆಯಲ್ಲಿದ್ದ ವೇಳೆ ವಾಟ್ಸ್ಆ್ಯಪ್ ನಂಬರ್ ಒಂದರಿಂದ ವಿಡಿಯೋ ಕರೆ ಬಂದಿದೆ. ಅದನ್ನು ಸ್ವೀಕರಿಸಿದಾಗ, ದೆಹಲಿಯ ಟೆಲಿಕಮ್ಯೂನಿಕೇಶನ್ ಡಿಪಾರ್ಟ್ಮೆಂಟ್ ಕಡೆಯಿಂದ ಮಾತನಾಡುವುದಾಗಿ ಹೇಳಿದ್ದಾರೆ. ಬಳಿಕ, ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬಳಸಿ ಮೊಬೈಲ್ ನಂಬರ್ ಖರೀದಿಸಿದ್ದು, ದೆಹಲಿಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಜಾಹೀರಾತು ಹಾಗೂ ಕಿರುಕುಳದ ಸಂದೇಶಗಳನ್ನು ಕಳುಹಿಸಿರುತ್ತೀರಿ ಎಂದು ತಿಳಿಸಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಗ ಮಹಿಳೆಯು, ತಾನು ಯಾವುದೇ ರೀತಿಯ ಸಂದೇಶಗಳನ್ನು ಹಾಗೂ ಜಾಹೀರಾತುಗಳನ್ನು ಕಳುಹಿಸಿಲ್ಲ. ಹಾಗೂ ನಂಬರ್ ನನ್ನದಲ್ಲ ಎಂದು ಉತ್ತರಿಸಿದಾಗ, ಆ ವ್ಯಕ್ತಿಯು ಹಾಗಿದ್ದಲ್ಲಿ ನಾನು ದೆಹಲಿ ಪೊಲೀಸರಿಗೆ ಕರೆ ವರ್ಗಾಯಿಸುತ್ತಿದ್ದೇನೆ. ಅವರಲ್ಲಿ ದೂರು ನೀಡಿ ಎಂದು ತಿಳಿಸಿ, ಕರೆ ವರ್ಗಾಯಿಸಿದ್ದಾನೆ. ಬಳಿಕ ಒಬ್ಬ ವ್ಯಕ್ತಿಯು ಪೊಲೀಸ್ ಸಮವಸ್ತ್ರ ಧರಿಸಿದ್ದು, ತಾನು ವಿಜಯ ಕುಮಾರ್, ದೆಹಲ್ಲಿ ಪೊಲೀಸ್, ಸಿಬಿಐ ಆಫೀಸರ್ ಎಂದು ಪರಿಚಿಯಿಸಿಕೊಂಡಿದ್ದಾನೆ. ನೀವು ಅನಧಿಕೃತ ಜಾಹೀರಾತು ಪ್ರಸಾರ ಹಾಗೂ ಕಿರುಕುಳ ನೀಡುವುದು ಹಾಗೂ ಮಾನವ ಕಳ್ಳಸಾಗಣೆಯಲ್ಲಿ ಪಾಲ್ಗೊಂಡಿರುವುದಾಗಿ ಹೇಳಿ ಶೇ.10 ಕಮಿಷನ್ ಹಣ ನಿಮ್ಮ ಖಾತೆಗೆ ಬಂದಿದ್ದು, ಈ ಬಗ್ಗೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ನಿಮಗೆ ಕಮಿಷನ್ ದುಡ್ಡು ನೀಡಿರುವ ಆರೋಪಿಯು ನ್ಯಾಯಾಲಯದಲ್ಲಿ ಸಾಕ್ಷಿಯನ್ನು ಹಾಜರುಪಡಿಸಿದ್ದು, ಹಾಗಾಗಿ ಕೋರ್ಟ್ ನಿಮಗೆ 3 ತಿಂಗಳ ಕಾಲ ಶಿಕ್ಷೆ ವಿಧಿಸಿ, ನಿಮ್ಮ ಎಲ್ಲಾ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ. ಆದೇಶದ ಪ್ರಕಾರ ನಾವು ನಿಮ್ಮನ್ನು ಈ ಕೂಡಲೇ ಅರೆಸ್ಟ್ ಮಾಡಲಿದ್ದು, ನೀವು ನಮ್ಮ ಅನುಮತಿ ಪಡೆಯದೇ ಮನೆಯಿಂದ ಹೊರಗೆ ಹೋಗುವಂತಿಲ್ಲ. ನಾವು ಹೇಳಿದಂತೆ ಕೇಳಬೇಕು, ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಹೆದರಿಸಿದ್ದಾನೆ.
ಬಳಿಕ ತನ್ನ ಎಲ್ಲಾ ಬ್ಯಾಂಕ್ ಖಾತೆ ಹಾಗೂ ಆಸ್ತಿಯ ವಿವರವನ್ನು ಕೇಳಿದ್ದು, ತಾನು ಭಯಗೊಂಡು ತನ್ನ ಬ್ಯಾಂಕ್ ಖಾತೆಯ ವಿವರ ಹಾಗೂ ಆಸ್ತಿಯ ವಿವರವನ್ನು ತಿಳಿಸಿದ್ದೇನೆ. ನಿಮ್ಮ ಬ್ಯಾಂಕ್ ಖಾತೆಗಳು ಫ್ರೀಝ್ ಆಗಲಿರುವುದರಿಂದ ನಿಮ್ಮ ಖಾತೆಗಳಲ್ಲಿರುವ ಎಲ್ಲಾ ಹಣವನ್ನು ನಾವು ತಿಳಿಸಿದ ಖಾತೆಗಳಿಗೆ ವರ್ಗಾವಣೆ ಮಾಡುವಂತೆ, ನಿಮ್ಮ ಮೇಲಾಗಿರುವ ಕೇಸ್ ಮುಗಿದ ಬಳಿಕ ನೀವು ವರ್ಗಾಯಿಸಿದ ಹಣವನ್ನು ಮರಳಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇದೊಂದು ರಾಷ್ಟ್ರೀಯ ಗೌಪ್ಯತೆಯ ವಿಚಾರವಾಗಿರುವುದಿಂದ, ಈ ವಿಚಾರವನ್ನು ಯಾರಲ್ಲಿಯೂ ತಿಳಿಸಬಾರದಾಗಿ ಸೂಚಿಸಿ, ಕರೆಯನ್ನು ಕಡಿತಗೊಳಿಸಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ವಿವರಿಸಿದ್ದಾರೆ.
ಎಫ್.ಡಿ ಹಣ ವರ್ಗಾವಣೆ: ಜೊತೆಗೆ, ಮೊಬೈಲ್ ನಂಬರ್ನಿಂದ ಆದಾಯ ತೆರಿಗೆ, ಇ.ಡಿ ಹೆಸರಿನಲ್ಲಿ ನೋಟಿಸ್ನ್ನು ಕಳುಹಿಸಿದ್ದಾರೆ. ನಂತರ ತಾನು ಜಾಗ ಮಾರಿದ ಹಣವನ್ನು ಬ್ಯಾಂಕಿನಲ್ಲಿ ಎಫ್.ಡಿ ಇಟ್ಟಿದ್ದನ್ನು ನನ್ನಿಂದ ತಿಳಿದುಕೊಂಡು, ಆ ಹಣವನ್ನು ಎಫ್.ಡಿಯಿಂದ ಹಿಂಪಡೆದು ಅವರು ಹೇಳಿದ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಸೆ.29ರಿಂದ ಅ.10ರವರೆಗೆ ಅಪರಿಚಿತ ವ್ಯಕ್ತಿಗಳು ಸೂಚಿಸಿರುವ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 1,16,00,000 ರೂ. ಹಣವನ್ನು ವರ್ಗಾಯಿಸಿದ್ದೇನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ದೂರಿನ ಪ್ರಕಾರ, ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post