ಮಂಗಳೂರು, ಜ 08 : ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಘಟನೆಯಲ್ಲಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕಿರಣ್ ರಾಜ್ ಶೆಟ್ಟಿ: ಕಾಸರಗೋಡು ಬಂಬ್ರಾಣ ಮೊಗೇರು ನಿವಾಸಿ ಕಿರಣ್ ರಾಜ್ ಶೆಟ್ಟಿ(24) ಎಂಬಾತನನ್ನು ಬಂಧಿತ ಆರೋಪಿ. ಈತನಿಂದ ಪೊಲೀಸರು 27.100 ಕೇಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ತಂಡ ನೀರುಮಾರ್ಗದ ಕುಟ್ಟಿಕಳ ಎಂಬಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದೆ. ಆರೋಪಿಯಿಂದ ಆಲ್ಟೋ ಕಾರು, 27.100 ಕೆಜಿ ಗಾಂಜಾ, ಮೊಬೈಲ್ ಫೋನ್, ನಗದು 1500 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಇವೆಲ್ಲದರ ಒಟ್ಟು ಮೌಲ್ಯ 9,88,500 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಯು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಆರೋಪಿ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.
ನೀಲ್ ಕಿಶೋರಿಲಾಲ್ ರಾಮ್ ಜಿ ಶಾ: ಮಂಗಳೂರು ನಗರದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಸಾರ್ವಜನಿಕರಿಗೆ ಹಾಗು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ ಗಾಂಜಾ ಸೇರಿದಂತೆ ಅನೇಕ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಗರೋತ್ತರ ಭಾರತೀಯ ಪ್ರಜೆಯಾಗಿರುವ ನೀಲ್ ಕಿಶೋರಿಲಾಲ್ ರಾಮ್ ಜಿ. ಶಾ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲಾಟ್ ವೊಂದರಲ್ಲಿ ವಾಸವಿದ್ದ ಈತ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ ಒಟ್ಟು 2 ಕೆ. ಜಿ ತೂಕದ 50 ಸಾವಿರ ರೂಪಾಯಿ ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, 7 ಸಾವಿರ ರೂಪಾಯಿ ನಗದು ಮತ್ತು ಡಿಜಿಟಲ್ ತೂಕ ಮಾಪನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈತನಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಆಂದಾಜು 78 ಸಾವಿರ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಆರೋಪಿಯು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿಶಾಖಪಟ್ಟಣದಿಂದ ಖರೀದಿಸಿಕೊಂಡು ಬಂದು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಾಝ್: ಮಂಗಳೂರು: ಮಾದಕ ವಸ್ತು ಎಂಡಿಎಂಎಯನ್ನು ಕೇರಳ-ಕರ್ನಾಟಕದ ಗಡಿಭಾಗದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಿಪು ಕೈರಂಗಳ ಗ್ರಾಮದ ನಿವಾಸಿ ನವಾಝ್ ಯಾನೆ ನವ್ವಾ ಯಾನೆ ಮುಡಿಪು ನವಾಸ್(35) ಬಂಧಿತ ಆರೋಪಿ. ಎಂಬಾತನನ್ನು ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಕೇರಳದ ಗಡಿಭಾಗ ಹಾಗೂ ಮುಡಿಪು ಪರಿಸರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ತಂಡ ಮುಡಿಪು ಪಂಚಾಯತ್ ಮೈದಾನ ಪರಿಸರದಲ್ಲಿ ಬೈಕ್ ನಲ್ಲಿ ಬಂದು ಮಾರಾಟ ಮಾಡುತ್ತಿದ್ದಾಗ ಬಂಧಿಸಿದೆ. ಈತನಿಂದ ಒಟ್ಟು 15 ಗ್ರಾಂ ತೂಕದ 75,000 ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು, ಮೊಬೈಲ್ ಫೋನ್ -2, ಡಿಜಿಟಲ್ ತೂಕ ಮಾಪನ, ನಗದು ರೂ. 3200 ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬಜಾಜ್ ಅವೆಂಜರ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲದರ ಒಟ್ಟು ಮೌಲ್ಯ 1,13,700 ರೂಪಾಯಿ ಎಂದು ಅಂದಾಜಿಸಲಾಗಿದೆ.
ದೇರಳಕಟ್ಟೆ, ತಲಪಾಡಿ, ಉಳ್ಳಾಲ ಹಾಗೂ ಮಂಗಳೂರು ನಗರ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಆರೋಪಿ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ದರೋಡೆಗೆ ಸಂಬಂಧಪಟ್ಟಂತೆ ಒಟ್ಟು 8 ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ , ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ ಪ್ರಕರಣ ಹೀಗೆ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post