ಮುಂಬೈ: 2008 ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಗುರುವಾರ ಬೆಳಗ್ಗೆ ಭಾರತಕ್ಕೆ ಬರಲಿದ್ದಾನೆ. ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ವಿಶೇಷ ತಂಡ ಈಗಾಗಲೇ ಅಮೆರಿಕದಿಂದ ವಿಮಾನದಲ್ಲಿ ಕರೆದುಕೊಂಡು ಬರುತ್ತಿದ್ದು ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ತನ್ನ ಹಸ್ತಾಂತರವನ್ನು ನಿಲ್ಲಿಸುವಂತೆ ಕೋರಿ ತಹವ್ವೂರ್ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. 2008ರ 26/11 ದಾಳಿಯ ಮಾಸ್ಟರ್ ಮೈಂಡ್ ತಹಾವೂರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾರತಕ್ಕೆ ಕರೆತರಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅವರನ್ನು ದೆಹಲಿಗೆ ಕರೆತರಲಾಗುತ್ತದೆಯೇ ಅಥವಾ ಮುಂಬೈಗೆ ಕರೆತರಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಅವರು 26/11 ಯೋಜನೆಯನ್ನು ಕಾರ್ಯಗತಗೊಳಿಸಿದ ಮುಂಬೈಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅವರು ಆರಂಭಿಕ ಕೆಲವು ವಾರಗಳನ್ನು ಎನ್‌ಐಎ ಕಸ್ಟಡಿಯಲ್ಲಿ ಕಳೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ತಹಾವೂರ್ ರಾಣಾ ಯಾರು?
ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸಿದ್ದ. ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು. ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡೀಪಾರುಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಗಡೀಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.
ಮುಂಬೈ ದಾಳಿ: 2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post