ಮಂಗಳೂರು: ಭಾರತೀಯ ವಾಯುಸೇನೆಯ ಪೈಲಟ್ ತರಬೇತಿಗೆ ಮಂಗಳೂರಿನ ಮನಿಷಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಇಂಡಿಯನ್ ಏರ್‌ಫೋರ್ಸ್ ಫ್ಲೈಯಿಂಗ್ ಬ್ರಾಂಚ್‌ಗೆ (ಐಎಎಫ್) ಆಯ್ಕೆಯಾಗಿರುವ ರಾಜ್ಯದ ಏಕೈಕ ಯುವತಿ ಮನಿಷಾ, ತೆಲಂಗಾಣದ ದುಂಡಿಗಲ್‌ನ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಜು. 9ರಿಂದ 74 ವಾರಗಳ ಕಾಲ ತರಬೇತಿ ಪಡೆಯಲಿದ್ದಾರೆ. ಈಕೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅಶೋಕನಗರದ ಮನೋಹರ ಶೆಟ್ಟಿ ಮತ್ತು ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ ದಂಪತಿ ಪುತ್ರಿ. ಮನೋಹರ ಶೆಟ್ಟಿ ಅವರ ಅಣ್ಣ ಯಶವಂತ್ ಶೆಟ್ಟಿ ಏರ್‌ಫೋರ್ಸ್‌ನಲ್ಲಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿ ನಿವೃತ್ತರಾಗಿದ್ದಾರೆ. ಮನೋಹರ್ ಅವರಿಗೆ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್ ಮಾಡಬೇಕೆಂಬ ಕನಸು ಇತ್ತು. ಹೀಗಾಗಿ, ಬಾಲ್ಯದಿಂದಲೇ ಮನಿಷಾಳನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸುತ್ತಿದ್ದರು.
ಏರ್‌ಫೋರ್ಸ್‌ಗೆ ಆಯ್ಕೆ ಆರು ತಿಂಗಳ ಪ್ರಕ್ರಿಯೆಯಾಗಿದ್ದು, ಮೊದಲು ಏರ್‌ಫೋರ್ಸ್ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು, ನಂತರ ದೇಶದ ಮೈಸೂರು, ಗುಜರಾತ್, ಗುವಾಹಟಿ, ವಾರಣಾಸಿ, ಡೆಹರಾಡೂನ್ ಈ ಐದು ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಬೇಕು. 250 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಇವರಲ್ಲಿ 59 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದರು. ನಂತರ ನಡೆದ ಮತ್ತೊಂದು ಪರೀಕ್ಷೆಯಲ್ಲಿ 15 ಮಂದಿ ಆಯ್ಕೆಯಾಗಿದ್ದರು. ಇದಾದ ಮೇಲೆ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಮೂವರು ಆಯ್ಕೆಯಾಗಿದ್ದರು. ಅವರಲ್ಲಿ ಮನಿಷಾ ಕೂಡ ಒಬ್ಬರ ಎಂದು ಪಾಲಕರು ತಿಳಿಸಿದರು. ಮನಿಷಾ, ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಸೇಂಟ್ ಅಲೋಶಿಯಸ್‌ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಮಾಡಿದ್ದು, ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post