ತಿರುವನಂತಪುರಂ: ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಲಕ್ಕಾಡ್ನ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16 ರಂದು ಗಲ್ಲಿಗೇರಿಸಲಾಗುವುದು ಎಂದು ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸಂಧಾನಕಾರ ಸ್ಯಾಮ್ಯುಯೆಲ್ ಜೆರೋಮ್ ಹೇಳಿದ್ದಾರೆ.
ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಕೇರಳ ಮೂಲದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್‌ನಲ್ಲಿ ವಿದೇಶಿ ಪ್ರಜೆಗಳಿಗೆ ಕಾನೂನುಬದ್ಧ ಅವಶ್ಯಕತೆಯಾಗಿರುವ ಕ್ಲಿನಿಕ್ ಅನ್ನು ತೆರೆಯಲು ಅವರಿಬ್ಬರೂ ಪಾರ್ಟನರ್ ಆಗಿದ್ದರು. ತಲಾಲ್ ಅವರ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ನಿಮಿಷಾ ಪ್ರಿಯಾ ತಲಾಲ್ ಅವರಿಗೆ ಡ್ರಗ್ ನೀಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು ಮಾದಕವಸ್ತುವಿನ ಅತಿಯಾದ ಸೇವನೆಯಿಂದ ಸಾವನ್ನಪ್ಪಿದ್ದರು.
ತಲಾಲ್ ಸಾವಿನ ನಂತರ, ನಿಮಿಷಾ ಪ್ರಿಯಾ ಮತ್ತು ಅವರ ಯೆಮೆನ್ ಸಹೋದ್ಯೋಗಿ ಹನಾನ್ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ನಿಮಿಷಾಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದರು. ಅವರು ತಮ್ಮ ದೈನಂದಿನ ಕೂಲಿ ಕಾರ್ಮಿಕರಾದ ಪೋಷಕರಿಗೆ ಆರ್ಥಿಕ ಸಹಾಯ ನೀಡಲು ಯೆಮೆನ್‌ಗೆ ತೆರಳಿದ್ದರು. ಆರಂಭದಲ್ಲಿ ಅವರು ಯೆಮೆನ್‌ನ ಹಲವಾರು ಆಸ್ಪತ್ರೆಗಳಲ್ಲಿ ಹಗಲು, ರಾತ್ರಿ ಕೆಲಸ ಮಾಡಿದರು. ನಂತರ ತಮ್ಮದೇ ಆದ ಕ್ಲಿನಿಕ್ ತೆರೆಯುವ ನಿರ್ಧಾರಕ್ಕೆ ಬಂದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು. ಸ್ವಂತ ಕ್ಲಿನಿಕ್ ತೆರೆಯುವುದು ಅವರ ಬಹುದಿನಗಳ ಆಸೆಯಾಗಿತ್ತು.
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ, ಮಧ್ಯಪ್ರಾಚ್ಯ ದೇಶದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾನೂನಿನ ಪ್ರಕಾರ, ನಿಮಿಷಾ ತಲಾಲ್ ಜೊತೆ ಕ್ಲಿನಿಕ್ ತೆರೆಯಲು ಷರತ್ತುಗಳನ್ನು ಮಾಡಿಕೊಂಡು, ಒಪ್ಪಂದ ಮಾಡಿಕೊಂಡರು. ನಿಮಿಷಾ 2015ರಲ್ಲಿ ಸನಾದಲ್ಲಿ ತಲಾಲ್ ಜೊತೆ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಹೀಗಾಗಿ, ತಲಾಲ್ ತನಗೆ ದೌರ್ಜನ್ಯ ಎಸಗಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಆಕೆ ಆರೋಪಿಸಿದ್ದರು. ಇದೇ ಕೋಪದಲ್ಲಿ ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಅವನು ಅವಳ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ.
ಬಳಿಕ ತಲಾಲ್ ವಿರುದ್ಧ ನಿಮಿಷಾ ಪೊಲೀಸ್ ದೂರು ದಾಖಲಿಸಿದರು. ಇದರಿಂದ 2016ರಲ್ಲಿ ಆತನನ್ನು ಬಂಧಿಸಲಾಯಿತು. ಅದಾದ ಸ್ವಲ್ಪ ಸಮಯದ ನಂತರ ಅವನನ್ನು ಬಿಡುಗಡೆ ಮಾಡಲಾಯಿತು. ಹೊರಗೆ ಬಂದ ತಲಾಲ್ ಮತ್ತು ನಿಮಿಷಾ ನಡುವೆ ಮತ್ತೆ ಜಗಳ ಹೆಚ್ಚಾಗಿತ್ತು. 2017ರಲ್ಲಿ ಇಬ್ಬರೂ ಜಗಳವಾಡಿದಾಗ ನಿಮಿಷಾ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮತ್ತು ಭಾರತಕ್ಕೆ ಹಿಂತಿರುಗಲು ಸ್ಥಳೀಯ ಜೈಲು ವಾರ್ಡನ್‌ನ ಸಹಾಯವನ್ನು ಕೋರಿದರು. ಅವರು ತಲಾಲ್ನನ್ನು ಅಶಕ್ತಗೊಳಿಸಲು ನಿದ್ರಾಜನಕಗಳನ್ನು ಬಳಸಲು ಸೂಚಿಸಿದರು. ಅವರ ಸಲಹೆಯಂತೆ ನಿಮಿಷಾ ತಲಾಲ್ ಬಳಿಯಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.
ಆಕೆಯ ತಾಯಿ ಪ್ರೇಮಾ ಕುಮಾರಿ ಮರಣದಂಡನೆಯ ವಿರುದ್ಧ ಯೆಮಿನಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ 2023ರಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಲಾಯಿತು. 2017ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯವು ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಿತು. ನಂತರ 2023ರಲ್ಲಿ ಯೆಮೆನ್ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಕೂಡ ಆಕೆಯ ಮರಣದಂಡನೆಯನ್ನು ಅನುಮೋದಿಸಿದ್ದರು. ಹೀಗಾಗಿ, ಆಕೆ ಜುಲೈ 16ರಂದು ಗಲ್ಲಿಗೇರಲಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post