ಮಂಗಳೂರು, ಆ.8 : ನಗರದ ಜ್ಯೋತಿ – ಹಂಪನಕಟ್ಟೆಯ ಮಧ್ಯದಲ್ಲಿರುವ ಮಸಾಜ್ ಪಾರ್ಲರ್ ಮಾಲೀಕನೊಬ್ಬ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗಿರಾಕಿಯೊಂದಿಗೆ ಮಸಾಜ್ ಹೆಸರಲ್ಲಿ ದೇಹ ಸುಖವನ್ನೂ ನೀಡುವಂತೆ ಒತ್ತಾಯಿಸಿದ ಬಗ್ಗೆ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆಯೊಬ್ಬರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ತನಗಾದ ನೋವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಬರ್ಕೆ ಪೊಲೀಸರಿಗೂ ದೂರು ನೀಡಿದ್ದಾರೆ.
ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದು ಒಂದೂವರೆ ತಿಂಗಳಿನಿಂದ ಹಂಪನಕಟ್ಟೆಯ ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಪುರುಷರಿಗೂ ಮಸಾಜ್ ಮಾಡಬೇಕು, ಕೊನೆಯಲ್ಲಿ ಸಂತೋಷದಿಂದ ಆತ ಹೊರ ಹೋಗುವಂತೆ ಮಾಡಬೇಕು. ಇದಕ್ಕಾಗಿ 500ರಿಂದ ಒಂದು ಸಾವಿರ ರೂ. ಹೆಚ್ಚುವರಿ ಚಾರ್ಜ್ ಮಾಡುವಂತೆ ನನಗೆ ಸೂಚಿಸಿದ್ದರು. ಆಗಸ್ಟ್ 6ರಂದು ಪಾರ್ಲರ್ ಮಾಲಕನಿಗೆ ಬೇಕಾದ ವ್ಯಕ್ತಿಯೊಬ್ಬ ಬಂದಿದ್ದು ಆ ವ್ಯಕ್ತಿಗೆ ಮಸಾಜ್ ಮಾಡುವಂತೆ ನನಗೆ ಹೇಳಿದ್ದರು. ನಾನು ಮಸಾಜ್ ಮಾಡಿದ್ದು, ಆನಂತರ ಆ ವ್ಯಕ್ತಿ ದೈಹಿಕ ಸಂಪರ್ಕ ಮಾಡುವಂತೆ ಕೇಳಿದ್ದಾನೆ. ನಾನು ಅದಕ್ಕೆ ನಿರಾಕರಿಸಿದ್ದು ಕೊಠಡಿಯಿಂದ ಹೊರಗೆ ಬಂದಿದ್ದೆ.
ಆದರೆ ಮಸಾಜ್ ಪಾರ್ಲರ್ ಮಾಲಕ ನನಗೆ ಆ ರೀತಿ ಮಾಡದ್ದಕ್ಕೆ ಹೊಡೆದು ಹಲ್ಲೆ ನಡೆಸಿದ್ದು, ನನ್ನ ಬಟ್ಟೆಗಳನ್ನು ತೆಗೆಸಿ ಅರೆನಗ್ನ ಫೋಟೋಗಳನ್ನು ತೆಗೆದಿದ್ದಾರೆ. ಆನಂತರ ನಿನ್ನ ಗಂಡನಿಗೂ ಈ ಫೋಟೋ ತೋರಿಸುತ್ತೇನೆ. ನಿನ್ನ ಲೈಫ್ ಬರ್ಬಾದ್ ಮಾಡುತ್ತೇನೆಂದು ಬೆದರಿಸಿದ್ದಾರೆ. ಆನಂತರ ಗಂಡನನ್ನು ಕರೆದು ಫೋಟೋಗಳನ್ನು ತೋರಿಸಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದಾರೆ. ನಗರದ ಹಲವು ಕಡೆ ಮಸಾಜ್ ಪಾರ್ಲರ್ ಗಳಲ್ಲಿ ಯುವತಿಯರು ಮಾಲಕರಿಂದ ಇದೇ ರೀತಿಯ ಕಿರುಕುಳ ಅನುಭವಿಸುತ್ತಿದ್ದಾರೆ. ಪುರುಷರೊಂದಿಗೆ ಮಸಾಜ್ ಮಾಡುವಂತೆ ಒತ್ತಡ ಹೇರಿ ದೈಹಿಕ ಕಿರುಕುಳವನ್ನೂ ನೀಡುತ್ತಾರೆ. ಯಾರು ಕೂಡ ಇದನ್ನು ಹೊರಗೆ ಹೇಳಲು ಮುಂದೆ ಬರುವುದಿಲ್ಲ.
ನನ್ನ ಬಳಿಯಿಂದ 30 ಸಾವಿರ ಕೊಡಬೇಕೆಂದು ಮಾಲಕ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಿದ ಮಹಿಳೆ, ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಕಮಿಷನರಿಗೂ ದೂರು ಹೇಳಿದ್ದೇನೆ. ಮಾಲಕನ ವಿರುದ್ಧ ಕ್ರಮ ಜರುಗಿಸಿಲ್ಲ. ಪ್ರತಿಭಾ ಕುಳಾಯಿ ಅವರು ಬೆಂಬಲಿಸಿದ್ದರಿಂದ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದರು.
ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮಾತನಾಡಿ, “ಪುರುಷ ಗ್ರಾಹಕರಿಗೆ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಮಹಿಳೆಯೊಬ್ಬರು ನನ್ನನ್ನು ಸಂಪರ್ಕಿಸಿ ಸಹಾಯ ಕೋರಿದ್ದರು. ಮಾಲೀಕರು ಅರೆಬೆತ್ತಲೆ ಫೋಟೋಗಳನ್ನು ತೆಗೆದು ಅವಳನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಆಗಸ್ಟ್ 6 ರಂದು ದೂರು ದಾಖಲಿಸಿದ್ದರೂ, ಎರಡು ದಿನಗಳ ನಂತರವೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ” ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post