ಮಂಗಳೂರು: ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಮಂಗಳ ಹಾಡಿದೆ. ಈ ವಾರದಿಂದ ವಾರಾಂತ್ಯ ನಿರ್ಬಂಧ ಇರುವುದಿಲ್ಲ. ಆದರೆ ಮುಂದಿನ ಆದೇಶದವರೆಗೂ ರಾತ್ರಿ ಕರ್ಫ್ಯೂ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಇರಲಿದೆ.
ಅಂಗಡಿಯವರಿಗೆ ನಿರ್ಬಂಧ ಇಲ್ಲ. ಆದರೆ ಅಂಗಡಿ ಮಾಲೀಕರು, ಸಿಬ್ಬಂದಿ ಒಂದನೇ ಲಸಿಕೆ ಹಾಕಿಸಿಕೊಂಡಿರಬೇಕು, 10 ದಿನಕ್ಕೊಮ್ಮೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಾಗ ಟೆಸ್ಟ್ ವರದಿ ತೋರಿಸಬೇಕು ಹಾಗೂ ಇಲಾಖೆಯ ಆದೇಶ ಪಾಲಿಸಬೇಕು. ಕೋವಿಡ್ ಸಮುಚಿತ ವರ್ತನೆ ಪಾಲಿಸಬೇಕು. ಈ ಆದೇಶ ಗುರುವಾರದಿಂದಲೇ ಜಾರಿ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶದಲ್ಲಿ ತಿಳಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ಕೋವಿಡ್ ಮತ್ತಷ್ಟು ಇಳಿಕೆಯಾಗಿದೆ. ಗುರುವಾರ 176 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಪಾಸಿಟಿವಿಟಿ ದರ 1.54ಕ್ಕೆ ಇಳಿದಿದೆ. ಒಟ್ಟು 225 ಮಂದಿ ಕೋವಿಡ್‌ನಿಂದ ಗುಣವಾಗಿದ್ದಾರೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,11,919ಕ್ಕೆ ತಲಪಿದ್ದರೆ ಡಿಸ್‌ಚಾರ್ಜ್ ಆದವರ ಸಂಖ್ಯೆ 1,08,233. ಗುರುವಾರ 13851 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುರುವಾರ 126 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. 7028 ಮಂದಿಯನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ದರ 1.79ರಷ್ಟಿದೆ. ಸೋಂಕಿತರಲ್ಲಿ 55 ಮಂದಿ ಉಡುಪಿ ತಾಲೂಕು, 33 ಮಂದಿ ಕುಂದಾಪುರ ಹಾಗೂ 35 ಮಂದಿ ಕಾರ್ಕಳ ತಾಲೂಕಿನವರು. 4 ಮಂದಿ ಹೊರ ಜಿಲ್ಲೆಯವರು. 59 ಮಂದಿ ರೋಗಲಕ್ಷಣ ಹೊಂದಿದ್ದು, 21 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 105 ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 57 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 1,437 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯ 455 ಮಂದಿಗೆ ಕೋವಿಡ್ ದೃಢಪಟ್ಟಿದೆ.
Discover more from Coastal Times Kannada
Subscribe to get the latest posts sent to your email.
Discussion about this post