ಮಂಗಳೂರು: ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ಮಹತ್ವದ ಸಾಧನೆ ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ. ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಆರ್ಥೋ ಪೆಡಿಕ್ ರೊಬೊಟಿಕ್ ವ್ಯವಸ್ಥೆ ‘ಸ್ಕೈವಾಕರ್’ ಸರ್ಜರಿಯನ್ನು ಆರಂಭಿಸಿದೆ. ಅಮೆರಿಕದ ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್ ಇಂಕ್ ಸಹಭಾಗಿತ್ವ ದಲ್ಲಿ ಈ ಸರ್ಜರಿ ವ್ಯವಸ್ಥೆಯನ್ನು ಯೆನೆಪೊಯದಲ್ಲಿ ಆರಂಭಿಸಲಾಗಿದೆ ಎಂದು ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್ ತಿಳಿಸಿದ್ದಾರೆ.
ಅವರು ಮಂಗಳವಾರ ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಹೊಸ ರೊಬೊಟಿಕ್ ಸರ್ಜರಿ ವ್ಯವಸ್ಥೆಯನ್ನು ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿ
ಎವೊಲ್ಯೂಷನ್ ಮೀಡಿಯಲ್-ಪೈವೊಟ್ ನೀ ಸಿಸ್ಟಮ್ ಜೊತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ ರೊಬೊಟಿಕ್ ಸರ್ಜರಿ ತಂತ್ರಜ್ಞಾನ ಸೈವಾಕರ್ ಆರ್ಥೋಪೆಡಿಕ್ ರೊಬೊಟಿಕ್ ಸಿಸ್ಟಮ್ ಆಗಿದೆ. ಇವೆರಡೂ ಸೇರಿಕೊಂಡು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಸಬ್-ಮಿಲಿಮೀಟರ್ ಮಟ್ಟದ ನಿಖರತೆಯನ್ನು ನೀಡುತ್ತವೆ. ಈ ತಂತ್ರಜ್ಞಾನವು ರೋಗಿಯ ನಿರ್ದಿಷ್ಟ ಅನಾಟಮಿಯನ್ನು ಆಧರಿಸಿ, ಪ್ರತಿಯೊಬ್ಬರಿಗೂ ಅವರಿಗೆ ಅಗತ್ಯವಿರುವ ರೀತಿಯಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಪೂರೈಸುತ್ತದೆ. ಅದರಿಂದಾಗಿ ಮಂಡಿ ಬದಲಾವಣೆಯ ಬಳಿಕ ರೋಗಿಗಳು ಬಹಳ ಬೇಗ ಚೇತರಿಸಿಕೊಂಡು, ಸುದೀರ್ಘ ಅವಧಿಯವರೆಗೆ ಯಾವುದೇ ನೋವಿಲ್ಲದೆ ಮೊದಲಿನಂತೆ ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ. ದೀರ್ಘ ನಡಿಗೆ, ಮೆಟ್ಟಿಲು ಹತ್ತಿಳಿಯುವುದು, ಕುಳಿತು-ಎದ್ದು ಮಾಡುವುದು ಹೀಗೆ ಪ್ರತಿಯೊಂದು ಕೆಲಸವನ್ನೂ ಮೊದಲಿನಂತೆ ಮಾಡುವ ಪ್ಲೆಕ್ಸಿಬಿಲಿಟಿಯನ್ನು ಈ ಶಸ್ತ್ರಚಿಕಿತ್ಸೆ ನೀಡುತ್ತದೆ.

ಹೊಸ ರೊಬೊಟಿಕ್ ಸರ್ಜರಿ ವ್ಯವಸ್ಥೆಯನ್ನು ಅನಾವರಣಗೊಳಿಸಿ ಈ ಕುರಿತು ಮಾಹಿತಿ ನೀಡಿದ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್, ‘ನಮ್ಮಲ್ಲಿಗೆ ಬರುವ ರೋಗಿಗಳ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಜಾಗತಿಕ ವೈದ್ಯಕೀಯ ಲೋಕದಲ್ಲಿ ಉಂಟಾಗುವ ಹೊಸ ಹೊಸ ಆವಿಷ್ಕಾರಗಳನ್ನು ತ್ವರಿತವಾಗಿ ಇಲ್ಲೂ ಅಳವಡಿಸಿಕೊಳ್ಳುವ ಕಾರ್ಯವನ್ನು ಯೆನೆಪೊಯ ಆಸ್ಪತ್ರೆ ಮಾಡುತ್ತಾ ಬಂದಿದೆ. ಇದೀಗ ಸ್ಕೈವಾಕರ್ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡುವುದರೊಂದಿಗೆ ದಕ್ಷಿಣ ಏಷ್ಯಾ ಮತ್ತು ಭಾರತಕ್ಕೆ ಈ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ಮೊದಲಿಗರಾಗಿ ನಾವು ಹೊರಹೊಮ್ಮಿದ್ದೇವೆ’ ಎಂದು ತಿಳಿಸಿದರು.
ಯೆನೆಪೊಯ ಆಸ್ಪತ್ರೆಯ ಮುಖ್ಯ ಆರ್ಥೋಪೆಡಿಕ್ ಹಾಗೂ ಮಂಡಿ ಬದಲಾವಣೆ ಸರ್ಜನ್ ಡಾ.ದೀಪಕ್ ರೈ ಅವರು ಭಾರತದ ಮೊದಲ ಸೈವಾಕರ್ ಸರ್ಜರಿಯನ್ನು ಯೆನೆಪೊಯದಲ್ಲಿ ಈಗಾಗಲೇ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅವರು ಮಾತನಾಡಿ, ಸೈವಾಕ ರೊಬೊಟಿಕ್ ವ್ಯವಸ್ಥೆಯು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ವೇಳೆ ಮಂಡಿಯ ಮರುನಿರ್ಮಾಣಕ್ಕೆ ಸಂಬಂಧಿಸಿದ ಹಾಗೂ ಲಿಗಮೆಂಟ್ ಬ್ಯಾಲೆನ್ಸಿಂಗ್‌ಗೆ ಸಂಬಂಧಿಸಿದ ರಿಯಲ್ ಟೈಮ್ ದತ್ತಾಂಶಗಳನ್ನು ನೀಡುತ್ತದೆ. ಎವೊಲ್ಯೂಷನ್ ಸಂಸ್ಥೆಯ ಮೀಡಿಯಲ್ ಪೈವೊಟ್ ವಿನ್ಯಾಸವು ಈ ವ್ಯವಸ್ಥೆಗೆ ಸಂಬಂಧಿಸಿದ ಪೇಟೆಂಟ್ ಹೊಂದಿದ್ದು, ಅದು ಮಂಡಿಯ ಸಹಜ ಚಲನೆಗೆ ಬೇಕಾದ ನಿಖರತೆಯನ್ನು ಒದಗಿಸುತ್ತದೆ. ಆರಂಭಿಕ ಕೆಲ ಮಂಡಿ ಬದಲಾವಣೆ ಸರ್ಜರಿಗಳಲ್ಲೇ ನಾವು ಉತ್ತಮ ಫಲಿತಾಂಶವನ್ನು ಕಾಣುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ಜಾಗತಿಕವಾಗಿ ಇಂದು ಆರ್ಥೋಪೆಡಿಕ್ಸ್‌ನಲ್ಲಿ ರೊಬೊಟಿಕ್ ತಂತ್ರಜ್ಞಾನಗಳನ್ನು ಹೆಚ್ಚೆಚ್ಚು ಬಳಸಲಾಗುತ್ತಿದೆ. ಅಮೆರಿಕದಲ್ಲಿ ಶೇ.40ಕ್ಕೂ ಹೆಚ್ಚು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗಳು ರೊಬೊಟಿಕ್ ಮಾದರಿಯಲ್ಲಿ ನಡೆಯುತ್ತವೆ. ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ರೋಗಿಗಳಿಗೆ ಹಾಗೂ ಸರ್ಜನ್‌ಗಳಿಗೆ ರೊಬೊಟಿಕ್ ವ್ಯವಸ್ಥೆಯಲ್ಲಿ ಹೆಚ್ಚಿನ ನಿಖರತೆ, ಅತಿ ಕಡಿಮೆ ವೈಫಲ್ಯದ ಪ್ರಮಾಣ, ವೇಗವಾಗಿ ಗುಣಮುಖರಾಗುವುದು ಮುಂತಾದ ಅನುಕೂಲಗಳು ಲಭಿಸುತ್ತಿವೆ. ಯೆನೆಪೊಯದಲ್ಲಿ ಭಾರತದಲ್ಲೇ ಮೊದಲ ಬಾರಿ ಮಂಡಿನೋವಿನ ರೋಗಿಗಳು ಈ ಅನುಭವವನ್ನು ಪಡೆಯಲಿದ್ದಾರೆ.
ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್‌ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಮತ್ತು ಜನರಲ್ ಮ್ಯಾನೇಜರ್ ಡಾ.ಮುಕೇಶ್ ಪಾರ್ಮರ್ ಈ ಕುರಿತು ಹೆಚ್ಚಿನ ಮಾಹಿತಿ ನೀಡಿ, ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರು ಉತ್ತಮ ಇಂಪ್ಲಾಂಟ್ ಆಯ್ಕೆ ಮಾಡಿಕೊಳ್ಳುವುದು ಕೂಡ ರೊಬೊಟಿಕ್ ಸರ್ಜರಿಯಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೃತಕ ಮಂಡಿಯು ರೋಗಿಯ ದೇಹದಲ್ಲಿ ಜೀವನಪೂರ್ತಿ ಇರುತ್ತದೆ. ಎವೊಲ್ಯೂಷನ್ ಮೀಡಿಯಲ್ ಪೈವೊಟ್ ಮಂಡಿಯು ಶೇ.95ರಷ್ಟು ರೋಗಿಗಳಿಗೆ ತೃಪ್ತಿ ತಂದಿದೆ. ಶೇ.98.8ರಷ್ಟು ರೋಗಿಗಳಲ್ಲಿ 17 ವರ್ಷಕ್ಕೂ ಹೆಚ್ಚು ಅವಧಿಯವರೆಗೆ ಬಾಳಿಕೆ ಬಂದಿದೆ. ಜಾಗತಿಕವಾಗಿ ಇದನ್ನು ಅಳವಡಿಸಿಕೊಂಡ ಶೇ.80ರಷ್ಟು ರೋಗಿಗಳು ತಮಗೆ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ಆಗಿದೆ ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಸೈವಾಕರ್ ಜೊತೆಗೆ ಸೇರಿದರೆ ಇದು ಇನ್ನೂ ಉತ್ತಮ ಫಲಿತಾಂಶ ನೀಡುತ್ತದೆ. ಶಸ್ತ್ರಚಿಕಿತ್ಸೆ ನಡೆಸುವ ಸರ್ಜನ್‌ಗಳಿಗೆ ಹೆಚ್ಚು ನಿಖರ ಸರ್ಜರಿ ನಡೆಸಲು ಹಾಗೂ ರೋಗಿಗಳಿಗೆ ಅತ್ಯುತ್ತಮ ಫಲಿತಾಂಶ ಪಡೆಯಲು ಇದು ಸಹಕಾರಿಯಾಗುತ್ತದೆ. ಯೆನೆಪೊಯದಂತಹ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಇದನ್ನು ಆರಂಭಿಸುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ. ಇದು ಈ ಪ್ರದೇಶದ ರೋಗಿಗಳಿಗೆ ಜಾಗತಿಕ ಗುಣಮಟ್ಟದ ಮಂಡಿ ಬದಲಾವಣೆ ಸೇವೆ ಲಭಿಸುವಂತೆ ಮಾಡಲಿದೆ’ ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post