ಉಳ್ಳಾಲ : ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಚೆಂಬುಗುಡ್ಡೆಯ ಯುವಕನ ಶವ ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದೆ. ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ನಿವಾಸಿ ಝಾಕೀರ್(36) ಎಂಬಾತ ಮೃತ ವ್ಯಕ್ತಿನಾಗಿದ್ದು, ಕುಟುಂಬಸ್ಥರು ಕೊಲೆ ಆರೋಪ ವ್ಯಕ್ತಪಡಿಸಿದ್ದಾರೆ. ಮೀನು ವ್ಯಾಪಾರಿಯಾಗಿದ್ದ ಝಾಕೀರ್ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದ. ಕಳೆದ ಸೆ.26ರಂದು ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದ ಝಾಕೀರ್, ಬಳಿಕ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಮೊಬೈಲ್ ರಿಂಗ್ ಆಗಿ ಸ್ವಿಚ್ ಆಫ್ ಆಗುತ್ತಿತ್ತು ಎಂದು ಹೇಳಲಾಗಿದೆ. ಹತ್ತು ದಿನಗಳಾದರೂ ಸಂಪರ್ಕಕ್ಕೆ ಸಿಗದ ಕಾರಣ ಎರಡು ದಿನಗಳ ಹಿಂದೆ ಯುವಕನ ಫೊಟೋ ಮತ್ತು ವಿವರವನ್ನು ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಆತ ಧರಿಸಿದ್ದ ಬಟ್ಟೆ, ಬೆಲ್ಟ್ ಗುರುತಿನ ಮೇರೆಗೆ ವಾರದ ಹಿಂದೆಯೇ ಮಂಜೇಶ್ವರ ಸಮುದ್ರದಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಪರಿಚಿತ ಶವವಾಗಿದ್ದ ಕಾರಣ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೆಲವು ದಿನ ಇಡಲಾಗಿದ್ದು, ಪೋಷಕರು ಬಾರದ ಹಿನ್ನೆಲೆಯಲ್ಲಿ ಸಮೀಪದ ಮಸೀದಿಯಲ್ಲಿ ದಫನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಯುವಕ ತೆಗೆದುಕೊಂಡು ಹೋಗಿದ್ದ ಬೈಕ್ ಸೋಮೇಶ್ವರದಲ್ಲಿ ಪತ್ತೆಯಾಗಿದ್ದು, ಒಬ್ಬನೇ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇವರು ಸ್ಥಿತಿವಂತರಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಇದೊಂದು ಕೊಲೆಯಾಗಿದೆ. ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಉಳ್ಳಾಲ ಠಾಣಾಧಿಕಾರಿಯಲ್ಲಿ ಮನವಿ ಮಾಡಿದ್ದು, ಸಿಸಿಟಿವಿ ದೃಶ್ಯಗಳನ್ನು ನೀಡಲಾಗಿದೆ. ಕುಟುಂಬ ವರ್ಗದವರು ಮೃತ ಝಾಕಿರ್ ಮೃತದೇಹವನ್ನ ಮರಳಿ ತೆಗೆಸಿ, ಮನೆಗೆ ತರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಮೃತ ಝಾಕಿರ್ ಗೆ ಓರ್ವ ಪುತ್ರನಿದ್ದು, ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post