ಉಳ್ಳಾಲ : ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಸ್ಕೂಟರ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಮಹಿಳೆಯ ಮೇಲೆ ಟ್ಯಾಂಕರ್ ಹರಿದು ಮೃತಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡ ಬಳಿ ಶನಿವಾರ ಸಂಜೆ ನಡೆದಿದೆ. ಮೃತ ಮಹಿಳೆಯನ್ನು ಮೂಲತಃ ಕುಳಾಯಿಯ ಪ್ರಸಕ್ತ ದೇರಳಕಟ್ಟೆಯಲ್ಲಿ ವಾಸವಾಗಿದ್ದ ರಹ್ಮತ್ (47) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ರಹ್ಮತ್‌ರ ಪತಿ ಅಬ್ದುಲ್ ರಶೀದ್ ಅವರಿಗೂ ಗಾಯವಾಗಿದೆ.
ರಶೀದ್ ಅವರು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿಯಾಗಿದ್ದು, ಶನಿವಾರ ಸಂಜೆ ಸುಮಾರು 4:30ಕ್ಕೆ ತನ್ನ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ತನ್ನ ಪತ್ನಿ ರಹ್ಮತ್‌ರನ್ನು ಕುಳ್ಳಿರಿಸಿ ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದರು. ತೊಕ್ಕೊಟ್ಟು-ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಹದಗೆಟ್ಟ ರಸ್ತೆಯ ಗುಂಡಿಯಿಂದ ಪಾರಾಗಲು ರಶೀದ್ ಹರಸಾಹಸ ಪಡುತ್ತಿದ್ದಂತೆಯೇ ನಿಯಂತ್ರಣ ಕಳಕೊಂಡು ಸ್ಕೂಟರ್ ಸ್ಕಿಡ್ಡಾಗಿ ಬಿತ್ತು ಎನ್ನಲಾಗಿದೆ. ಇದರಿಂದ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ರಹ್ಮತ್ ರಸ್ತೆಗೆ ಎಸೆಯಲ್ಪಟ್ಟರು. ಅದೇ ರಸ್ತೆಯಲ್ಲಿ ವೇಗದಲ್ಲಿದ್ದ ಟ್ಯಾಂಕರ್ ರಹ್ಮತ್‌ರ ಮೇಲೆಯೇ ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದಿಂದ ರಹ್ಮತ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ರಹ್ಮತ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಉದ್ರಿಕ್ತ ಗುಂಪಿನಿಂದ ರಸ್ತೆಗೆ ಅಡ್ಡ ಕಲ್ಲುಗಳ ಇಟ್ಟು ಪ್ರತಿಭಟನೆ: ಈ ಸಂದರ್ಭ ರಸ್ತೆಗೆ ಬಿದ್ದಿದ್ದ ರೆಹಮತ್ ರ ಮೇಲೆ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿಯ ಹಿಂಬದಿಯ ಚಕ್ರ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಘಟನೆ ನಡೆದಿರುವುದಾಗಿ ಆರೋಪಿಸಿದ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದೆ. ಇದರಿಂದಾಗಿ ತೊಕ್ಕೊಟ್ಟು ಕೊಣಾಜೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಾಹನಗಳೆಲ್ಲವೂ ಸರತಿ ಸಾಲುಗಳಲ್ಲಿ ನಿಂತರೆ, ಹಲವು ವಾಹನಗಳು ಬೀರಿ ಮಾರ್ಗವಾಗಿ ಸಂಚರಿಸುತ್ತಿದೆ. ಉದ್ರಿಕ್ತ ಗುಂಪು ಹಾಗೂ ಉಳ್ಳಾಲ ಪೊಲೀಸರ ನಡುವೆ ತೀವ್ರ ವಾಗ್ದಾಳಿ ನಡೆದಿದೆ.
108 ಆಂಬ್ಯುಲೆನ್ಸ್ ಅವ್ಯವಸ್ಥೆ! ಅಪಘಾತದಲ್ಲಿ ಮೃತಪಟ್ಟ ಮಹಿಳೆ ರೆಹಮತ್ ಮೃತದೇಹ ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಇತ್ತು. 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದಾಗ ತಾಂತ್ರಿಕ ಕಾರಣಗಳ ನೀಡಿ ಸ್ಥಳಕ್ಕಾಗಮಿಸಲಿಲ್ಲ. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಜನ ಆಂಬ್ಯುಲೆನ್ಸ್ ಅವ್ಯವಸ್ಥೆಯ ವಿರುದ್ಧವೂ, ನಿತ್ಯ ಹೊಂಡಗುಂಡಿಯ ರಸ್ತೆಯ ಬದಿಯಲ್ಲೇ ನಿಂತು ದಂಡ ಪಡೆಯುವ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಸಂಚಾರಿ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಎಸಿಪಿ ಧನ್ಯಾ ನಾಯಕ್, ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್ ಭೇಟಿ ನೀಡಿ ಉದ್ರಿಕ್ತರ ಸಮಾಧಾನಿಸಿದರು. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Discover more from Coastal Times Kannada
Subscribe to get the latest posts sent to your email.
Discussion about this post