ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾಷಷ್ಠಿ ಆಚರಣೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ನಡೆಯುವ ಮೂಲಕ ಚಂಪಾಷಷ್ಠಿ ಸಂಪನ್ನಗೊಡಿದೆ. ಪರುಶುರಾಮ ಸೃಷ್ಟಿಯ ಸಪ್ತ ಮಹಾ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ಈ ರಾಜ್ಯದ ಅತ್ಯಂತ ಶ್ರೀಮಂತ ದೇಗುಲ. ಹೀಗಾಗಿಯೇ ಕುಕ್ಕೆಯ ಪವಿತ್ರ ಮಣ್ಣಿನಲ್ಲಿ ನಡೆಯುವ ಚಂಪಾಷಷ್ಠಿ ಉತ್ಸವಕ್ಕೆ ಹೆಚ್ಚಿನ ವಿಶೇಷತೆಯಿದೆ. ಕಾರ್ತಿಕ ಬಹುಳ ದ್ವಾದಶಿಯಿಂದ ಆರಂಭಗೊಂಡು ಮಾರ್ಗಶಿರ ಶುದ್ದ ಪೌರ್ಣಮಿಯವರೆಗೆ ಕುಕ್ಕೆ ಕ್ಷೇತ್ರದಲ್ಲಿ ಅತ್ಯಂತ ಸಂಭ್ರಮ ಉತ್ಸವ ನಡೆಯುತ್ತೆ.
ಮಾರ್ಗಶಿರ ಶುದ್ದ ಷಷ್ಠಿಯನ್ನ ಚಂಪಾಷಷ್ಠಿ ಅಂತಾನೆ ಕರೆಯಲಾಗುತ್ತೆ. ಈ ದಿನ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಹೀಗಾಗಿ ಇಂದು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕ್ಕಿಯಲ್ಲಿ ಬಂದು ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಮತ್ತು ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗಿದ್ದರು. ನಂತ್ರ ಎರಡು ರಥಗಳನ್ನ ಎಳೆಯೋ ಮೂಲಕ ಕ್ಷೇತ್ರದ ರಥಬೀದಿಯಲ್ಲಿ ಬ್ರಹ್ಮರೋಥೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು.
ಮೊದಲಿಗೆ ಪಂಚಮಿ ರಥವನ್ನ ಎಳೆದ್ರೆ, ನಂತ್ರ ಬ್ರಹ್ಮರಥವನ್ನ ಎಳೆಯಲಾಗುತ್ತೆ. ಈ ವೇಳೆ ಭಕ್ತಾಧಿಕಾರಿ ತಮ್ಮ ಹರಕೆಯಂತೆ ಕಾಳಮೆಣಸು, ಹಣ ಮತ್ತು ಏಲಕ್ಕಿಯನ್ನ ರಥಕ್ಕೆ ಎಸೆದು ಕೃತಾರ್ಥರಾದ್ರು. ಅಲ್ಲದೇ ಅನೇಕ ಮಂದಿ ರಥವನ್ನ ಎಳೆದು ಧನ್ಯರಾದ್ರು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ಯಾವುದೇ ವಿಘ್ನಗಳಿಲ್ಲದೇ ನಿರ್ವಿಘ್ನವಾಗಿ ನಡಿಯಿತು. ಊರು-ಪರವೂರಿಗಳಿಂದ ಬಂದ ಲಕ್ಷಾಂತರ ಭಕ್ತರು ಸುಬ್ರಹ್ಮಣ್ಯನ ಭವ್ಯ ರಥೋತ್ಸವವನ್ನ ಕಣ್ತುಂಬಿಕೊಂಡು ಧನ್ಯರಾದರು.
ಭಾನುವಾರ ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪಲ್ಲಕ್ಕಿಯಲ್ಲಿ ರಥಬೀದಿಗೆ ತಂದು, ನಂತರ ಬಂಡಿ ರಥದಲ್ಲಿ ಕುಮಾರಧಾರಾವರೆಗೆ ಅವಭೃತೋತ್ಸವದ ಸವಾರಿ ಮೆರವಣಿಗೆ ಮೂಲಕ ತರಲಾಯಿತು. ಈ ನಡುವೆ ಇಲ್ಲಿನ ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಬಳಿಕ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಪುಷ್ಪಾಲಂಕೃತವಾಗಿ ಸಿಂಗರಿಸಲ್ಪಟ್ಟ ಎರಡು ದೋಣಿಗಳನ್ನು ಜೋಡಿಸಿ ಮಾಡಿದ ಸುಂದರ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ನಡೆಯಿತು. ಕುಮಾರಧಾರೆಯ ಜಳಕದಗುಂಡಿಯಲ್ಲಿ ನೂರಾರು ಭಕ್ತರ ಸಾನಿಧ್ಯದಲ್ಲಿ ದೇಗುಲದ ಪುರೋಹಿತರ ಮಂತ್ರ ಘೋಷದೊಂದಿಗೆ ಅವಭೃತೋತ್ಸವ ಜರುಗಿತು.
ಶ್ರೀ ದೇವರ ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ವಿಶೇಷ ಕಟ್ಟೆಪೂಜೆ ನೆರವೇರಿಸಲಾಯಿತು. ನೆರೆದ ಭಕ್ತರ ನಡುವೆ ಕುಮಾರಧಾರಾ ನದಿಯಲ್ಲಿ ದೇಗುಲದ ಆನೆ ಯಶಸ್ವಿನಿ ನೀರಾಟವಾಡಿ ಖುಷಿಪಟ್ಟಿತು.
Discover more from Coastal Times Kannada
Subscribe to get the latest posts sent to your email.
Discussion about this post