ಮಂಗಳೂರು:2024ರ ಫೆಬ್ರವರಿ ತಿಂಗಳಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಯಬಿಟ್ಟು ಸಾಮರಸ್ಯ ಕೆಡಿಸುವ ಯತ್ನ ಮಾಡಿದ್ದು ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದೇಶದಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಅಲ್ಲಿಂದ ಬರುವಾಗಲೇ ಮುಂಬೈ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ.
ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (56) ಬಂಧಿತ ಆರೋಪಿ. ಆರೋಪಿತ 2024ರ ಫೆಬ್ರವರಿ ತಿಂಗಳಿನಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಈತನ ವಿರುದ್ದ 29/2024 50 153(2), 504, 507, 509 & ಕಲಂ 66(ಡಿ) ಐ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಯು ಆ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿದ್ದರಿಂದ ಬಂಧಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ ಮೂಲತಃ ಮುಂಬೈನ ಚಾರ್ಕೋಪ್ ಎಂಬಲ್ಲಿಯವನಾಗಿದ್ದಾರೆ. ಈತ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿ ವಿರುದ್ಧ ಲುಕ್ ಔಟ್ ಸರ್ಕುಲರ್ (LOC) ಹೊರಡಿಸಲಾಗಿತ್ತು. ಆರೋಪಿಯು ಮುಂಬೈನ ಸಹರಾ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದು ಇಳಿಯುತ್ತಿದ್ದಂತೆ, ಇಮಿಗ್ರೇಶನ್ ಅಧಿಕಾರಿಗಳು ತಡೆಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ, ಆತನನ್ನು ಡಿಸೆಂಬರ್ 5ರಂದು ಮುಂಬೈನ ಸಹರಾ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಆರೋಪಿಯನ್ನು ತನಿಖೆಗೆ ಒಳಪಡಿಸಿ, ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿತ ಎವಿಜಿನ್ ಜಾನ್ ಡಿಸೋಜಾ ಎಂಬವನನ್ನು 2024 ಆಗಸ್ಟ್ 11ರಂದು ಬಂಧನ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ’ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post