ಮಂಗಳೂರು, ಜ.10: ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್(86) ಇನ್ನಿಲ್ಲ. ಅಲ್ಪಕಾಲದ ಅಸೌಖ್ಯದಿಂದ ಅವರು ಮಂಗಳೂರಿನ ಲಾಲ್ ಬಾಗ್ ಬಳಿಯ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಮೂಲತಃ ಕಾಸರಗೋಡಿನ ಚಂದ್ರಗಿರಿ ತೀರದವರಾದ ಸಾರಾ ವಿವಾಹವಾದ ಬಳಿಕ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು. ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿಯ ಮೂಲಕ ಪ್ರಸಿದ್ಧಿಗೆ ಬಂದಿದ್ದ ಸಾರಾ ಅಬೂಬಕರ್ ಅನೇಕ ಕೃತಿಗಳನ್ನು ರಚಿಸಿ ಖ್ಯಾತರಾಗಿದ್ದರು. ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಾರಾ ಅಬೂಬಕರ್ ಅವರ ಪ್ರಥಮ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮಂಗಳೂರಿನ ಬಂದರ್ ಝೀನತ್ ಬಕ್ಷ್ ಮಸೀದಿ ಆವರಣದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೃತಿಗಳು: ಸಾರಾ ಅಬೂಬಕರ್ ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ ಇತ್ಯಾದಿ ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮುಂತಾದ ಕಥಾ ಸಂಕಲನ, ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದ ಬಾನುಲಿ ನಾಟಕಗಳನ್ನು ರಚಿಸಿದ್ದಾರೆ. ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ ಇತ್ಯಾದಿ ಅನುವಾದಗಳನ್ನು ರಚಿಸಿರುವ ಅವರು, ‘ಐಷಾರಾಮದಲ್ಲಿ’ ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ. ಅವರು ಮಲಯಾಳಂನ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರಶಸ್ತಿಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳು ಸಾರಾ ಅಬೂಬಕರ್ ಅವರನ್ನು ಅರಸಿ ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಹೀಗೆ ಅನೇಕ ಪ್ರಶಸ್ತಿ, ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post