ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಗುಜರಾತ್ ಬಳಿಕ ಕರ್ನಾಟಕವೇ ಅಭಿವೃದ್ಧಿಯಲ್ಲಿ ಅಗ್ರಪಂಕ್ತಿಯಲ್ಲಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಇದನ್ನು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಯರೆಡ್ಡಿ ಅವರೇ ಹೇಳಿದ್ದಾರೆ. ಇದುವೇ ಕಾಂಗ್ರೆಸ್‌ನ ನಿಜವಾದ ಆಡಳಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಕಾಂಗ್ರೆಸ್ ಸರಕಾರವು ಬೆಲೆ ಏರಿಕೆ ಹಾಗೂ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಕ್ಲಾಕ್‌ಟವರ್‌ವರೆಗೆ ಬುಧವಾರ ಆಯೋಜಿಸಲಾದ ಜನಾಕ್ರೋಶ ಯಾತ್ರೆಯ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ರಾಜ್ಯ ಸರಕಾರದ ನಿರಂತರ ಬೆಲೆಯೇರಿಕೆ ಮತ್ತು ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ನೀಡುವುದನ್ನು ವಿರೋಧಿಸಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ವಿಜಯೇಂದ್ರ ಮಾತನಾಡಿದರು. ಹಿಂದು ಹುಡುಗಿಯರ ಮೇಲೆ ಅತ್ಯಾಚಾರ, ಆಕ್ರಮಣ ಆಗುತ್ತಿದ್ದರೂ ಸಿದ್ದರಾಮಯ್ಯ ಸರಕಾರ ಆವರ ಆತ್ಮರಕ್ಷಣೆಗೆ ಯೋಜನೆ ರೂಪಿಸಿಲ್ಲ. ಮುಸ್ಲಿಮ್ ಹುಡುಗಿಯರ ರಕ್ಷಣೆಗಾಗಿ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದಾರೆ. ಅಲ್ಲದೆ, ಮುಸ್ಲಿಮ್ ಹೆಣ್ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಹಣ ಕೊಡುತ್ತಿದ್ದಾರೆ ಎಂದು ಹೇಳಿದ ವಿಜಯೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಇವರಿಗೆ ಓಟ್ ಕೊಟ್ಟಿಲ್ಲ ಎಂದು ಅನುದಾನ ಕೊಡುತ್ತಿಲ್ಲ. ಬಿಜೆಪಿ ಸರಕಾರ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಗೆ 19 ಸಾವಿರ ಕೊಟ್ಟಿತ್ತು. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ ಏನಾದ್ರೂ ಕೊಟ್ಟಿದೆಯಾ ಎಂದು ಪ್ರಶ್ನಿಸಿದರು.
ಪ್ರವೀಣ್ ನೆಟ್ಟಾರು ಹಂತಕ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತಿಡುತ್ತಾನೆ. ನಮ್ಮ ಸರ್ಕಾರ, ಯಡಿಯೂರಪ್ಪ ಸರ್ಕಾರವಿದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ ಗುಂಡಿಕ್ಕುತ್ತಿದ್ದೆವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸಿದ್ದರಾಮಯ್ಯ ಸಿಎಂ ಆದ ಮೇಲೆ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಸಹಿತ 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಜಮ್ಮು ಅಭಿವೃದ್ಧಿಗೆ ಅನುದಾನ ನೀಡಿದ ಪ್ರಧಾನಿ ಮೋದಿ ಅವರನ್ನು ಜಮ್ಮು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿನಂದಿಸಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಕೇಂದ್ರದ ವಿರುದ್ಧ ಸಂಘರ್ಷ ಹಾದಿ ತುಳಿದಿದೆ ಎಂದ ಅವರು, ತಮ್ಮ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದರು. ರಾಜ್ಯದ ಮುಖ್ಯಮಂತ್ರಿ ಆದ ಮೇಲೆ ಸಿದ್ದರಾಮಯ್ಯ ಅವರು ಎಷ್ಟು ಬಾರಿ ಮಂಗಳೂರಿಗೆ ಭೇಟಿ ಕೊಟ್ಟಿದ್ದೀರಿ, ಎಷ್ಟು ಅನುದಾನ ಕೊಟ್ಟಿದ್ದೀರಿ, ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲಿ ಇಲ್ಲವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ದಪ್ಪ ಚರ್ಮದ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾನ ಮರ್ಯಾದೆ ಕಳೆದುಕೊಂಡಿದೆ. ಸೋತ ಅಭ್ಯರ್ಥಿಗಳು ಕೂಡ ತಮ್ಮ ಲೆಟರ್‌ಹೆಡ್ ಬಳಸಿ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಜನವಿರೋಧಿ ನೀತಿ ವಿರುದ್ಧ ಗ್ರಾಮ, ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಜನ ಜಾಗೃತಿ ಮೂಡಿಸಬೇಕಿದೆ ಎಂದರು.
ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಬಿಜೆಪಿ ನಾಯಕರ ಜೊತೆಗೆ ಕಾರ್ಯಕರ್ತರು ಕಾಲ್ನಡಿಗೆ ಯಾತ್ರೆ ನಡೆಸಿ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದರು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ್ ಕಾಮತ್, ಡಾ| ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ವಿ.ಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಎಸ್. ಅಂಗಾರ, ಸಂಜೀವ ಮಠಂದೂರು, ಪ್ರೀತಂ ಗೌಡ, ಉದಯ ಕುಮಾರ್, ಸಿಮೆಂಟ್ ಮಂಜು, ರವಿ ಕುಮಾರ್, ಮುನಿಸ್ವಾಮಿ ಉಪಸ್ಥಿತರಿದ್ದರು. ತಿಲಕ್‌ರಾಜ್ ಕೃಷ್ಣಾಪುರ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post