ನೆಲ್ಯಾಡಿ : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೆಲ್ಯಾಡಿ ಸಮೀಪದ ಲಾವತ್ತಡ್ಕದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಕ್ಕೆ ಪರವಾನಗಿ ನೀಡಿರುವ ವಿರುದ್ಧ ಗ್ರಾಮಸ್ಥರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರಿಂದ ಕಡಬ ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಕಟ್ಟಡವನ್ನು ಭಾಗಶಃ ತೆರವುಗೊಳಿಸಲಾಗಿದೆ. ಲಾವತ್ತಡ್ಕ ಎಂಬಲ್ಲಿ ಗುಂಡ್ಯ ಹೊಳೆ ಬದಿಯಲ್ಲಿ ಇಚ್ಲಂಪಾಡಿ ನಿವಾಸಿ ಸತೀಶ್ ಕಟ್ಟಡ ನಿರ್ಮಿಸಿ ಹೋಟೆಲ್ ನಡೆಸುತ್ತಿದ್ದರು. ಕಟ್ಟಡವನ್ನು ನದಿ ದಡದವರೆಗೂ ವಿಸ್ತರಿಸಿ ಅಲ್ಲೇ ವಾಸವಾಗಿದ್ದರು.
ಲೋಕಾಯುಕ್ತಕ್ಕೆ ದೂರು: ರಾಷ್ಟ್ರೀಯ ಹೆದ್ದಾರಿ ಜಾಗ ಹಾಗೂ ನದಿ ಪರಂಬೋಕು ಅತಿಕ್ರಮಿಸಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡಕ್ಕೆ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಮತ್ತು ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ನೂಜಿಬಾಳ್ತಿಲ ಪಿಡಿಒ, ಕಡಬ ತಹಶೀಲ್ದಾರ್, ನೆಲ್ಯಾಡಿ ಮೆಸ್ಕಾಂ, ಗಣಿ ಮತ್ತು ಭೂವಿಜ್ಞಾನ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ರಮೇಶ್ ಬಾಬು ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಟ್ಟಡದ ಮುಂಭಾಗಕ್ಕೆ ಹಾಕಿದ್ದ ಸಿಮೆಂಟ್ ಶೀಟ್, ಬಾಗಿಲು ತೆರವುಗೊಳಿಸಲಾಗಿದೆ.
ಕಾಟಾಚಾರದ ತೆರವು: ಅಕ್ರಮ ಕಟ್ಟಡ ತೆರವಿಗೆ ಅಧಿಕಾರಿಗಳು ಜೆಸಿಬಿ ಸಮೇತ ಬಂದಿದ್ದರೂ ಕಟ್ಟಡದ ಎದುರಿನ ಬಾಗಿಲು ಮತ್ತು ಕೆಲವು ಸಿಮೆಂಟ್ ಶೀಟ್ ಮಾತ್ರ ತೆರವುಗೊಳಿಸಿದ್ದಾರೆ. ಅಕ್ರಮವಾಗಿ ನಿರ್ಮಿಸಿರುವ ಈ ಕಟ್ಟಡವನ್ನು ಪೂರ್ಣವಾಗಿ ನೆಲಸಮ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪೂರ್ಣ ಕಟ್ಟಡ ತೆರವಿಗೆ ಕ್ರಮ: ತಹಶೀಲ್ದಾರ್ : ಕಟ್ಟಡವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಾಗದಲ್ಲಿದ್ದು, ನದಿ ಪರಂಬೋಕು ಸೇರಿದೆ. ಹೋಟೆಲ್ ತೆರವುಗೊಳಿಸಲೂ ಆದೇಶ ಮಾಡಲಾಗಿತ್ತು. ಸತೀಶ್ ಅವರು ಅಲ್ಲಿಯೇ ವಾಸವಾಗಿದ್ದು, ಅವರಿಗೆ ಬೇರೆ ಮನೆ ಇಲ್ಲ ಎಂಬ ಮಾಹಿತಿ ಇದ್ದುದರಿಂದ ಪೂರ್ಣ ಕಟ್ಟಡ ತೆರವುಗೊಳಿಸಿರಲಿಲ್ಲ. ಈಗ ಸತೀಶ್ ಅವರಿಗೆ ಇಚ್ಲಂಪಾಡಿಯಲ್ಲಿ ಮನೆ ಇದೆ ಎಂಬ ಮಾಹಿತಿ ಸಿಕ್ಕಿದ್ದು, ಕಟ್ಟಡವನ್ನು ಪೂರ್ಣವಾಗಿ ತೆರವು ಮಾಡಲಾಗುವುದು ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post