ಉಡುಪಿ: ಇಲ್ಲಿನ ಖಾಸಗಿ ಪ್ಯಾರ ಮೆಡಿಕಲ್ ವೀಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ಗುರುವಾರ ಉಡುಪಿಗೆ ಆಗಮಿಸಿ ಉಡುಪಿ ಬನ್ನಂಜೆ ಸರಕಾರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಉಡುಪಿ ಎಸ್ ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಸಿಐಡಿ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಐಡಿ ಎಡಿಜಿಪಿ ಮನೀಷ್, ” ಉಡುಪಿಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆಉಡುಪಿ ಪೊಲೀಸರು ನಡೆಸಿದ ತನಿಖೆ ರಿಪೋರ್ಟ್ ಕೂಡಾ ಪಡೆದುಕೊಳ್ಳಲಾಗಿದೆ. ಈಗಾಗಲೇ ನಾನುಪೊಲೀಸ್ ಮತ್ತು ಸಿಐಡಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮಾತ್ರವಲ್ಲದೇ ಮುಂದೆ ಏನೇನು ತನಿಖಾ ಪ್ರಕ್ರಿಯೆ ನಡೆಸಬೇಕು ಈ ಬಗ್ಗೆ ಚರ್ಚಿಸಲಾಗಿದೆ” ಎಂದು ಹೇಳಿದ್ದಾರೆ.
ಇನ್ನು ಕಾಲೇಜಿಗೆ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜುಲೈ 18ರಂದು ನಡೆದ ಘಟನೆಯ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿ, ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿಯ ಹೇಳಿಕೆಗಳನ್ನು ಸಿಐಡಿ ತಂಡ ದಾಖಲಿಸಿಕೊಂಡಿದೆ.
ಸಿಐಡಿ ತನಿಖೆ ವೇಳೆ ಕಾಣಿಸಿಕೊಂಡ ಪ್ಲ್ಯಾಸ್ಟಿಕ್ ಗೊಂಬೆ ಗಮನ ಸೆಳೆಯಿತು. ಕಾಲೇಜಿಗೆ ಗೊಂಬೆಯನ್ನು ತಂದು ಪ್ರಕರಣವನ್ನು ಸಿಐಡಿ ತಂಡ ಮರು ಸೃಷ್ಟಿ ಮಾಡಿತು. ಘಟನೆ ನಡೆದ ಶೌಚಾಲಯ, ಕಾಲೇಜಿನ ವರಾಂಡಾದಲ್ಲಿ ಮಹಜರು ಪ್ರಕ್ರಿಯೆ ನಡೆಸಲು ಗೊಂಬೆಯನ್ನು ಬಳಸಿಕೊಳ್ಳಲಾಯಿತು. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿ ಅಂಜುಮಾಲಾ, ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿ ತನಿಖಾ ಪ್ರಕ್ರಿಯೆ ನಡೆಯಿತು.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತನಿಖಾಧಿಕಾರಿ ಕೈ ಸೇರಿದ ಬಳಿಕ ಪ್ರಕರಣದ ತನಿಖೆ ಆದ ನಂತರ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆಮಾಡಲಿದ್ದೇವೆ. ಸಿಐಡಿ ತನಿಖೆ ಉಡುಪಿಯಲ್ಲಿ ಮುಂದುವರೆಯುತ್ತದೆ. ಮೂರು ಮೊಬೈಲ್ ಎಫ್ಎಸ್ಎಲ್ ವರದಿಗೆ ಕಾಯುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post