ಉಳ್ಳಾಲ: ಮಂಜನಾಡಿ ಉರುಮಣೆಕೋಡಿ ಮನೆ ಕುಸಿತ ದುರಂತ ಪ್ರಕರಣದಲ್ಲಿ ಅತ್ತೆ, ಇಬ್ಬರು ಮಕ್ಕಳನ್ನು ಹಾಗೂ ತನ್ನೆರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರನ್ನು ವಿಚಾರಣೆಗೆ ಬರಲು ಹೇಳಿದ ಅಧಿಕಾರಿಯೇ ಗೈರಾಗಿದ್ದು, ಸಂಬಂಧಿಕರು ಮತ್ತು ಸ್ಥಳೀಯರು ಈ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭದಲ್ಲಿ ಭಾರೀ ಮಳೆಯ ವೇಳೆ ಗುಡ್ಡ ಮನೆಯ ಮೇಲೆ ಕುಸಿದಿತ್ತು. ಈ ವೇಳೆ ಗೋಡೆ ಅಶ್ವಿನಿ ಅವರ ಕಾಲಿನ ಮೇಲೆಯೇ ಬಿದ್ದು, ರಕ್ಷಣ ಕಾರ್ಯ ವಿಳಂಬವಾಗಿದ್ದರಿಂದ ಆಸ್ಪತ್ರೆಯಲ್ಲಿ ಅವರ ಎರಡೂ ಕಾಲುಗಳನ್ನು ತೆಗೆಯಲಾಗಿತ್ತು. ಅಂದಿನಿಂದ ಅವರು ಯಾತನೆಯ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಘಟನೆಯ ಕುರಿತು ಮಾಹಿತಿ ಪಡೆಯುವುದಕ್ಕಾಗಿ ಘಟನಾ ಸ್ಥಳಕ್ಕೆ ಅಶ್ವಿನಿ ಅ.8 ರಂದು 11 ಗಂಟೆಗೆ ಘಟನಾ ಸ್ಥಳದಲ್ಲಿ ಹಾಜರಿರುವಂತೆ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಾಟ್ಸ್ ಆ್ಯಪ್ ಮೂಲಕ ನೋಟಿಸ್ ನೀಡಿದ್ದರು.
ಅದರಂತೆ ಅಶ್ವಿನಿಯವರನ್ನು ಕುಟುಂಸ್ಥರು ಹರೇಕಳದ ತಾಯಿ ಮನೆಯಿಂದ ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಆದರೆ 11 ಗಂಟೆಯಾದರೂ ತನಿಖಾಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಮೊಬೈಲ್ ಮೂಲಕ ಅಧಿಕಾರಿಯನ್ನು ಸಂಬಂಧಿಕರು ಸಂಪರ್ಕಿಸಿದ್ದಾರೆ. ಈ ವೇಳೆ ಅಧಿಕಾರಿ, ತಾನು ಅನಾರೋಗ್ಯಕ್ಕೀಡಾಗಿದ್ದಾನೆ. ಆದ್ದರಿಂದ ಬರುವುದಿಲ್ಲ ಎಂದು ಬೆಳಗ್ಗೆ 9:30ರ ಸುಮಾರಿಗೆ ಅಶ್ವಿನಿಯವರ ಸಂಬಂಧಿಕರ ಮೊಬೈಲ್ ಗೆ ಸಂದೇಶ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಹೆಚ್ಚು ಮಾತನಾಡದೇ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿ ವರ್ತನೆಯನ್ನು ವಿರೋಧಿಸಿದ ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ, ಅಶ್ವಿನಿ ಅವರ ಮಕ್ಕಳು ಹಾಗೂ ಅತ್ತೆ ಸಾವಿಗೆ ರಸ್ತೆಗಾಗಿ ಅಗೆದ ಗುಡ್ಡವೂ ಕಾರಣವಾಗಿದೆ. ಇದಕ್ಕೆ ಈಗಾಗಲೇ ಅಧಿಕಾರಿಗಳು ನೀಡಿರುವ ಸುಳ್ಳು ವರದಿಗಳು ಸಾಕ್ಷಿಯಾಗುತ್ತಿದೆ. ಇಂದು ತನಿಖೆ ನಡೆಸಬೇಕಾಗಿದ್ದ ಎಂಜಿನಿಯರ್ ಅವರೇ ಕೊನೇ ಘಳಿಗೆಯಲ್ಲಿ ಕೈಕೊಟ್ಟಿದ್ದು, ಅಶ್ವಿನಿ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹೀಗೇ ಮುಂದುವರಿದಲ್ಲಿ ಉಗ್ರ ರೀತಿಯಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಸಂಬಂಧಿ ಸುಮಲತಾ ಕೊಣಾಜೆ ಮಾತನಾಡಿ, ಕಾಲುಗಳಿಲ್ಲದ ಅಶ್ವಿನಿಯನ್ನು ಕರೆತರಲು ಎಷ್ಟು ಕಷ್ಟವಿದೆ ಅನ್ನುವ ಸೌಜನ್ಯವೂ ಅಧಿಕಾರಿಗಳಲ್ಲಿ ಇಲ್ಲ. ಮನೆ ಕುಸಿತಗೊಂಡು 4 ತಿಂಗಳುಗಳು ಕಳೆದರೂ ತೆರವುಗೊಳಿಸುವ ಕೆಲಸಗಳು ಆಗಿಲ್ಲ. ಅಶ್ವಿನಿ ಚಿಕಿತ್ಸಾ ವೆಚ್ಚ, ಬದುಕು ನಡೆಸಲು ಹಣ ಹೊಂದಿಸಲಾಗದೆ ಸಾಮಾಜಿಕ ಜಾಲತಾಣದ ಮೂಲಕ ಯುವಸಮುದಾಯ ಭಿಕ್ಷೆ ಬೇಡುವ ಸ್ಥಿತಿಗೆ ಬಂದು ತಲುಪಿದೆ. ಮನೆಯೊಳಗೆ ಬೆಲೆಬಾಳುವ ವಸ್ತುಗಳು ಇದ್ದು, ತೆರವುಗೊಳಿಸುವ ಆದೇಶವನ್ನು ಅಧಿಕಾರಿಗಳು ಮಾಡದೇ ಕುಟುಂಬವನ್ನು ಸರಕಾರವೇ ಬೀದಿಗೆ ತಂದು ನಿಲ್ಲಿಸಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಗಟ್ಟಿ ಕೊಣಾಜೆ, ಕಾರ್ಯದರ್ಶಿ ರಮೇಶ್ ಬೆದ್ರೊಳಿಕೆ, ಜೀವನ್ ಪ್ರಕಾಶ್ ಮಂಜನಾಡಿ, ಉದಯ್ ಮಂಜನಾಡಿ, ರಾಧಾಕೃಷ್ಣ, ಧಕ್ಷರಾಜ್, ನಿತೇಶ್, ಜಗದೀಶ್ ಕುಲಾಲ್, ಪತಿ ಸೀತಾರಾಮ್, ಸಹೋದರರಾದ ಪವನ್, ಜಗದೀಶ್ ಕುಲಾಲ್, ಕೃಷ್ಣ ಕುಲಾಲ್, ಸುಖಾನಂದ್ ಶೆಟ್ಟಿ ಮುಂತಾದವರು ಸ್ಥಳದಲ್ಲಿ ಉಪಸ್ಥಿತರಿದ್ದು, ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ಅಶ್ವಿನಿ ಅವರಿಗೆ ನ್ಯಾಯ ಸಿಗದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post