ಮೈಸೂರು: ದಸರಾ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಬಲೂನು, ಇತರ ವಸ್ತುಗಳನ್ನು ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಶವ ನಗರದ ಕುಸ್ತಿ ಅಖಾಡದ ಮುಂಭಾಗದ ಮೈದಾನದಲ್ಲಿ ದೊರೆತಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಸಂದರ್ಭದಲ್ಲಿ ಬಲೂನು ಮಾರಲು 500ಕ್ಕೂ ಹೆಚ್ಚು ಜನರಿದ್ದ ಸುಮಾರು 50 ಕುಟುಂಬಗಳು ಕಲಬುರಗಿ ಜಿಲ್ಲೆಯಿಂದ ಮೈಸೂರಿಗೆ ಬಂದಿವೆ. ಹೀಗೆ ಬಂದವರು ದಸರಾ ವಸ್ತು ಪ್ರದರ್ಶನದ ಪಕ್ಕದ ಕುಸ್ತಿ ಅಖಾಡದ ಮುಂಭಾಗದಲ್ಲಿರುವ ಇಟ್ಟಿಗೆ ಗೂಡಿನ ಮೈದಾನದಲ್ಲಿ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದರು. ಒಂದು ಕುಟುಂಬದ 8 ಜನ ಶೆಡ್‌ವೊಂದರಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗಿದ್ದ 9 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆ. ಬೆಳಗಿನ ಜಾವ ಈ ಬಗ್ಗೆ ತಿಳಿದ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಬಳಿಕ, ಕೆಲ ಹೊತ್ತಲ್ಲೇ ಶೆಡ್ ಪಕ್ಕದಲ್ಲೇ ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿಯ ತಾಯಿ ನೀಡಿದ ದೂರಿನ ವಿವರ: ನನ್ನ ಮಗಳು ಎಂದಿನಂತೆ ಅವಳ ಅಜ್ಜಿಯ ಜೊತೆ ಮಲಗಿದ್ದಳು. ಬೆಳಗಿನಜಾವ ಮಳೆ ಬಂದಿದ್ದರಿಂದ ಜೋಪಡಿಗೆ ಟಾರ್ಪಲ್ ಹಾಕುವ ಸಲುವಾಗಿ ನಾನು ಮತ್ತು ನನ್ನ ಗಂಡ ಇಬ್ಬರು ಎದ್ದೆವು. ಆಗ ಮಗಳು ಕಾಣಿಸಲಿಲ್ಲ. ತಕ್ಷಣ ಅಕ್ಕ-ಪಕ್ಕದ ಜೋಪಡಿಗಳಲ್ಲಿ ಹುಡುಕಾಡಿದರೂ ಸಹ ಅವಳು ಕಂಡುಬರಲಿಲ್ಲ. ಆಗ ಅಲ್ಲೇ ಪಕ್ಕದ ಜಾಗವೊಂದರಲ್ಲಿ ಮಗಳ ಚೂಡಿದಾರದ ಪ್ಯಾಂಟ್, ಇತರ ಬಟ್ಟೆ ಸಿಕ್ಕಿತು. ಸುತ್ತಮುತ್ತ ಹುಡುಕಾಡಿದಾಗ ಹತ್ತಿರದಲ್ಲಿದ್ದ ಒಂದು ಗುಂಡಿಯಲ್ಲಿ ಮಗಳು ಕಂಡುಬಂದಳು. ಅವಳ ಮೈಮೇಲೆ ಚೂಡಿದಾರದ ಟಾಪ್ ಬಟ್ಟೆ ಮಾತ್ರ ಇತ್ತು. ಅವಳನ್ನು ಎತ್ತಿಹಿಡಿದು ಮಾತನಾಡಿಸಲು ಯತ್ನಿಸಿದಾಗ ಆಕೆ ಮಾತನಾಡಲಿಲ್ಲ. ಅವಳ ತಲೆಯ ಎಡಭಾಗಕ್ಕೆ ಗಾಯಗಳಾಗಿ ರಕ್ತ ಬಂದಿದ್ದು, ಎಡಭಾಗದ ಕೆನ್ನೆ, ಕತ್ತು ಸೇರಿದಂತೆ ಇತರೆಡೆ ಗಾಯವಾಗಿತ್ತು. ಯಾರೋ ರಾತ್ರಿ ಮಗಳನ್ನು ಕಿಡ್ನಾಪ್ ಮಾಡಿ, ರೇಪ್ ಮಾಡಿ, ಕೊಲೆ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.
ದಸರಾ ದೀಪಾಲಂಕಾರ ಇನ್ನೂ ಇರುವ ಕಾರಣ ಹೊಟ್ಟೆಪಾಡಿಗಾಗಿ ದಸರಾಕ್ಕೆ ಕುಟುಂಬ ಕಟ್ಟಿಕೊಂಡು ಬಂದ ಹಲವರು ನಗರದ ಅರಮನೆ, ವಸ್ತು ಪ್ರದರ್ಶನ ಆವರಣ, ಚಾಮುಂಡಿಬೆಟ್ಟ, ದೇವರಾಜು ಅರಸು ರಸ್ತೆ ಹಾಗೂ ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಕಡೆ ವ್ಯಾಪಾರ ಮಾಡಿಕೊಂಡು ರಾತ್ರಿ ಈ ಮೈದಾನದಲ್ಲಿ ಮಾಡಿಕೊಂಡಿದ್ದ ಶೆಡ್ನಲ್ಲಿ ಮಲಗುತ್ತಿದ್ದರು.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಶ್ವಾನ ದಳ ಹಾಗೂ ಎಫ್ಎಸ್ಎಲ್ ತಂಡಗಳು ಭೇಟಿ ನೀಡಿ, ಪರಿಶೀಲನೆ ನಡೆಸಿವೆ. ಕಾನೂನು ಸುವ್ಯವಸ್ಥೆ ಡಿಸಿಪಿ ಬಿಂದುರಾಣಿ ಮಾಹಿತಿ ನೀಡಿ, ”ಘಟನೆ ಬಗ್ಗೆ ತಂದೆ, ತಾಯಿಯರಿಂದ ದೂರು ಸ್ವೀಕರಿಸಲಾಗಿದೆ. ಬಾಲಕಿಯ ಸಾವಿನ ಕುರಿತಂತೆ ತನಿಖೆ ನಡೆಸಲಾಗುವುದು” ಎಂದರು. ಈ ಕುರಿತಂತೆ ಸ್ಥಳೀಯರೊಬ್ಬರು ಮಾತನಾಡಿ, ”ಬಾಲಕಿಯ ಶವವನ್ನು ಬೆಳಗ್ಗೆ 6:30ಕ್ಕೆ ನೋಡಿದ್ದೇವೆ. ಏನಾಗಿದೆ ಎಂಬುದು ಗೊತ್ತಿಲ್ಲ. ಪೊಲೀಸರು ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post