ಮಹಾರಾಷ್ಟ್ರ: ಮುಂಬೈ ಮೂಲದ ಚಿನ್ನದ ವ್ಯಾಪಾರಿಯೊಬ್ಬ ಸೋಲಾಪುರದಿಂದ ಮುಂಬೈಗೆ ರೈಲು ಪ್ರಯಾಣ ಮಾಡುತ್ತಿದ್ದರು. ಅವರು ನಿದ್ರೆಗೆ ಜಾರಿದ ವೇಳೆ, ಅವರ ಬಳಿ ಇದ್ದ 5.53 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಡಿಸೆಂಬರ್ 6 ಮತ್ತು 7ರ ಮಧ್ಯರಾತ್ರಿ ಸಂತ್ರಸ್ತರು ಸಿದ್ಧೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋಲಾಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣ್ ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್‌ಪಿ) ಪ್ರಕಾರ, ವ್ಯಾಪಾರಿ 4,456 ಗ್ರಾಂ ಚಿನ್ನದ ಆಭರಣಗಳನ್ನು ಹೊಂದಿರುವ ಎರಡು ಟ್ರಾಲಿ ಬ್ಯಾಗ್‌ಗಳನ್ನು ಸರಪಳಿಯಿಂದ ಭದ್ರಪಡಿಸಿಕೊಂಡು ತಮ್ಮ ಸೀಟಿನ ಕೆಳಗೆ ಇಟ್ಟಿದ್ದರು. ಅವರು ನಿದ್ರಿಸುತ್ತಿದ್ದಾಗ ಅಪರಿಚಿತ ಕಳ್ಳನೊಬ್ಬ ಸರಪಣಿ ಮುರಿದು ಎರಡೂ ಬ್ಯಾಗ್‌ಗಳನ್ನು ಕದ್ದು, ಸೋಲಾಪುರ ಮತ್ತು ಕಲ್ಯಾಣ್ ಮಾರ್ಗದ ನಡುವೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ವ್ಯಾಪಾರಿ ನಿದ್ದೆ ಮಾಡುತ್ತಿದ್ದಾಗ ಬಂಗಾರದ ಬ್ಯಾಗ್ಗಳನ್ನ ಎಗರಿಸಿದ ಖದೀಮರು: ನಿದ್ದೆಯಿಂದ ಎಚ್ಚರಗೊಂಡ ವ್ಯಾಪಾರಿ, ಎರಡೂ ಬ್ಯಾಗ್‌ಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಗಾಬರಿಗೊಂಡ ಅವರು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಭರಣ ಕಳೆದುಕೊಂಡ ವ್ಯಾಪಾರಿ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 305 (ಸಿ) ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಯ ಕುರಿತಂತೆ ಮಾತನಾಡಿರುವ ಕಲ್ಯಾಣ್ ಜಿಆರ್‌ಪಿಯ ಹಿರಿಯ ಇನ್ಸ್‌ಪೆಕ್ಟರ್ ಪಂಢರಿ ಕಾಂಡೆ, ನಾವು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದೇವೆ. ಕಳ್ಳರು ವ್ಯಾಪಾರಿ ನಿದ್ದೆಗೆ ಜಾರಿದ್ದರ ಲಾಭ ಪಡೆದು ಚಿನ್ನದ ಆಭರಣಗಳನ್ನು ಹೊಂದಿರುವ ಚೀಲಗಳೊಂದಿಗೆ ಪರಾರಿಯಾಗಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಶಂಕಿತನನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ. ಆರೋಪಿಗಳನ್ನು ಪತ್ತೆಹಚ್ಚಲು ಜಿಆರ್‌ಪಿ ತಂಡಗಳು ಪ್ರಯಾಣಿಕರ ಪಟ್ಟಿ, ಮಾರ್ಗದ ಉದ್ದಕ್ಕೂ ಇರುವ ನಿಲ್ದಾಣಗಳಿಂದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂಭಾವ್ಯ ಪ್ರವೇಶ – ನಿರ್ಗಮನಗಳನ್ನು ಪರಿಶೀಲಿಸುತ್ತಿವೆ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post