ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಹಲವು ಯುವತಿಯರಿಗೆ ಮೋಸ ಮಾಡಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ವಂಚಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ವಂಚಿಸುತ್ತಿದ್ದ ಸುಶಾಂತ್ ಪೂಜಾರಿ ಮತ್ತು ಮದುವೆಯೊಂದಕ್ಕೆ ಸಹಾಯ ಮಾಡಿದ ಭಾಸ್ಕರ್ ಬಂಧಿತರು.
ಪ್ರಕರಣದ ವಿವರ: ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಮ್ಯಾಟ್ರಿಮನಿ ಸೈಟ್ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 2025 ಫೆ. 2 ರಂದು ಮದುವೆಯಾಗಿದ್ದರು. ಈ ಮಹಿಳೆಯನ್ನು ನಂಬಿಸಿ ಸುಶಾಂತ್ ಪೂಜಾರಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡಿದ್ದನು. ಮೋಸ ಮಾಡುವ ಉದ್ದೇಶದಿಂದ 2025ರ ನವೆಂಬರ್ 15 ರಿಂದ ನಾಪತ್ತೆಯಾಗಿದ್ದನು. ನಂತರದ ದಿನಗಳಲ್ಲಿ ಈ ಬಗ್ಗೆ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಹಲವು ಕಡೆಗಳಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದಿದೆ. ಹೀಗಾಗಿ ನೊಂದ ಮಹಿಳೆಯು ಕಾವೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ದೂರು ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಆರೋಪಿತ ಸುಶಾಂತ್ ಪೂಜಾರಿ ಯಾನೆ ಸುಶಾಂತ್ ಅಂಕುಶ್ ಪೂಜಾರಿ ಯಾನೆ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ಫೆ. 5 ರಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಮ್ಯಾಟ್ರಿಮನಿ ಸೈಟ್ ಮೂಲಕ ಪರಿಚಯ ಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುವುದು ತಿಳಿದುಬಂದಿದೆ. ಉಡುಪಿ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದು, ಮುಂಬೈನ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುವುದು ತಿಳಿದುಬಂದಿದೆ. ಅದೇ ರೀತಿ ಬೆಂಗಳೂರಿನಲ್ಲೂ ಇಬ್ಬರು ಯುವತಿಗೆ ಮಂಕುಬೂದಿ ಎರಚಿ ಮೋಸ ಮಾಡಿದ್ದಾನೆ. ಅಲ್ಲದೆ, ಕಾರ್ಕಳದ ಓರ್ವ ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದರು.
ಸದ್ರಿ ಪ್ರಕರಣದಲ್ಲಿ ಆರೋಪಿ ಸುಶಾಂತ್ ಪೂಜಾರಿಗೆ ಮುಂಬೈನಲ್ಲಿ ಮದುವೆಯಾಗಲು ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತ ಸಹಕರಿಸಿದ್ದಾನೆ. ಮುಂಬೈನ ಮಹಿಳೆಯ ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿ ಸುಶಾಂತ್ ತನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಮೋಸ ಮಾಡಿದ್ದಾನೆ. ಸುಶಾಂತ್ ಪೂಜಾರಿ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದ. ಇದಕ್ಕಾಗಿ ಈತನನ್ನೂ ದಸ್ತಗಿರಿ ಮಾಡಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ತಿಳಿಸಿದರು.
ಆರೋಪಿ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 202/2017 ಕಲಂ: 406, 420 ಐಪಿಸಿ, ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022 ಕಲಂ: 379 ಐಪಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಕಲಂ:336(ಎ), 370, 370(4), 376(2), (ಎನ್) 342, ಜೊತೆಗೆ 34 ಐಪಿಸಿ ಕಲಂ:3, 4, 5 ಸೇರಿದಂತೆ ಕಲಂ:4, 8, 12 ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
Discover more from Coastal Times Kannada
Subscribe to get the latest posts sent to your email.







Discussion about this post