ಮುಂಬೈ, ಮಾ 10: ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿಈಗಾಗಲೇ ದೊಡ್ಡ ಹೆಸರು ಮಾಡಿರುವ ಭಾರತ, ಈಗ ಮಿಸ್ ವರ್ಲ್ಡ್ 2024 ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಸಾಕ್ಷಿಯಾಗಿದೆ. ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಫಿನಾಲೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 2024ರ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ 71ನೇ ವಿಶ್ವ ಸಂದರಿ ಪಟ್ಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾಗೆ 2022ರ ಸುಂದರಿ ಪೋಲೆಂಡ್‌ನ ಕರೋಲಿನಾ ಬೈಲಾವಸ್ಕ ಅವರು ಕಿರೀಟ ತೋಡಿಸಿದರು.

ಕರಣ್ ಜೋಹರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಬಾಲಿವುಡ್ ನಟಿಯರಾದ ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿ 12 ಜನರಿದ್ದ ಜಡ್ಜ್‌ಗಳ ತಂಡ 120 ಸುಂದರಿಯರ ನಡುವೆ 2024 ವಿಶ್ವಸುಂದರಿಯನ್ನು ಆಯ್ಕೆ ಮಾಡಿತು. ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನೇತೃತ್ವದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಿತು. ಅಂದಹಾಗೆ, ಈ ಹಿಂದೆ 1996ರಲ್ಲಿ ವಿಶ್ವ ಸಂದರಿ ಭಾರತದಲ್ಲಿ ನಡೆದಿತ್ತು. ಆಗ ಗ್ರೀಸ್‌ನ ಸ್ಕ್ಲಿವಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇನ್ನು, ಈ ಹಿಂದಿನ ಆವೃತ್ತಿಯಲ್ಲಿ ಪೋಲೆಂಡ್‌ನ ಕರೋಲಿನಾ ಬೈಲಾವಸ್ಕ ಪ್ರಶಸ್ತಿ ಪಡೆದುಕೊಂಡಿದ್ದರು.
ಸಿನಿ ಶೆಟ್ಟಿಗೆ ಸಿಗಲಿಲ್ಲ ಪಟ್ಟ! : ಇನ್ನು, ಲೆಬನಾನ್ ಸುಂದರಿ ಯಾಸ್ಮಿನ್ ಜೈಟೌನ್ ಮೊದಲ ರನ್ನರ್‌ಅಪ್ ಪ್ರಶಸ್ತಿ ಪಡೆದರು. 28 ವರ್ಷಗಳ ನಂತರ ಭಾರತದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮಾಜಿ ‘ಮಿಸ್ ಇಂಡಿಯಾ’, ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಅವರು ಭಾರತದ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅವರು ಅಗ್ರ ಎಂಟು ಸ್ಪರ್ಧಿಗಳಲ್ಲಿ ಸ್ಥಾನ ಪಡೆಯುವಲ್ಲಷ್ಟೇ ಯಶಸ್ವಿಯಾದರು. ಅಗ್ರ 4ರ ಒಳಗೆ ಬರಲು ಅವರಿಗೆ ಸಾಧ್ಯವಾಗಲಿಲ್ಲ.

120 ದೇಶಗಳ ಚೆಲುವೆಯರು : ಫೆಬ್ರವರಿ 18ರಂದು ‘ಬ್ಯೂಟಿ ವಿತ್ ಎ ಪರ್ಪಸ್’ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಈ ಸ್ಪರ್ಧೆಯಲ್ಲಿ ಹಲವು ಸುತ್ತುಗಳು ನಡೆದಿದ್ದವು. ಇದರಲ್ಲಿ ಒಟ್ಟು 120 ದೇಶಗಳ ಚೆಲುವೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸ್ಪರ್ಧಾ ಮನೋಭಾವವನ್ನು ಪ್ರದರ್ಶಿಸಿದರು. ಶನಿವಾರ (ಮಾ.9) ರಾತ್ರಿ 7.30 ಗಂಟೆಗೆ ಆರಂಭವಾದ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆಯಲ್ಲಿ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕರಾದ ನೇಹಾ ಕಕ್ಕರ್, ಟೋನಿ ಕಕ್ಕರ್ ಮತ್ತು ಶಾನ್ ಅಮೋಘ ಪ್ರದರ್ಶನ ನೀಡಿದರು. ಬಳಿಕ ಸ್ಪರ್ಧಿಗಳಿಗೆ ಪ್ರಶ್ನೋತ್ತರ ಸುತ್ತು ನಡೆಯಿತು.
ಕ್ರಿಸ್ಟಿನಾ ಪಿಸ್ಕೋವಾ ಅವರು ಕಾನೂನು ಮತ್ತು ಬ್ಯುಸಿನೆಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. “ನಾನು ಭಾರತವನ್ನು ಪ್ರೀತಿಸುತ್ತೇನೆ. ಇಲ್ಲಿನ ಜನರು ತುಂಬಾ ಚೆನ್ನಾಗಿ ಸ್ವಾಗತ ನೀಡಿದ್ದಾರೆ ಮತ್ತು ತುಂಬಾ ಒಳ್ಳೆಯವರು. ನನಗೆ ನನ್ನ ಮನೆಯಲ್ಲೇ ಇದ್ದೇನೆ ಎಂಬ ಭಾವ ಇದೆ. ನಾನು ತುಂಬ ಎಮೋಷನಲ್ ಆಗಿದ್ದೇನೆ, ಸಂತೋಷ ಮತ್ತು ಉತ್ಸಾಹ ನನ್ನೊಳಗೆ ತುಂಬಿದೆ” ಎಂದು ಕ್ರಿಸ್ಟಿನಾ ಪಿಸ್ಕೋವಾ ಹೇಳಿದ್ದಾರೆ.
ತಮ್ಮ ದೇಶದ ಬಗ್ಗೆ ಮಾತನಾಡಿರುವ ಅವರು, “ನಮ್ಮಲ್ಲಿ ಅನೇಕ ಸುಂದರ ಐತಿಹಾಸಿಕ ಸ್ಥಳಗಳಿವೆ. ನಾವು ಯುರೋಪಿನಾದ್ಯಂತ ಅತಿ ಹೆಚ್ಚು ಕೋಟೆಗಳನ್ನು ಹೊಂದಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post